ಸೌಜನ್ಯಾ ಪ್ರಕರಣ: ಶೀಘ್ರದಲ್ಲೇ ಧರ್ಮಸ್ಥಳದವರೆಗೆ ಬೃಹತ್ ರ್‍ಯಾಲಿ ನಡೆಸಲು ತೀರ್ಮಾನ

ಬೆಂಗಳೂರು : ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಹಾಗೂ ಧರ್ಮಸ್ಥಳದಲ್ಲಿ ನಡೆದಿರುವ ಎಲ್ಲ ಪ್ರಕರಣಗಳನ್ನು ಖಂಡಿಸಿ, ಶೀಘ್ರದಲ್ಲೇ ಬೆಂಗಳೂರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಧರ್ಮಸ್ಥಳದ ವರೆಗೆ ಬೃಹತ್ ರ್‍ಯಾಲಿ ನಡೆಸಲಾಗುವುದು ಎಂದು ಸಾಹಿತಿ, ಚಿಂತಕರು, ಹೋರಾಟಗಾರರು ಇಂದಿಲ್ಲಿ ತೀರ್ಮಾನಿಸಿದ್ದಾರೆ.
ಮಂಗಳವಾರ ನಗರದ ಶೇಷಾದ್ರಿಪುರದಲ್ಲಿರುವ ಎಐಟಿಯುಸಿ ಸಭಾಂಗಣದಲ್ಲಿ ನಡೆದ ಸಾಹಿತಿ, ಚಿಂತಕರು, ಹೋರಾಟಗಾರರ ದಿಕ್ಸೂಚಿ ಸಭೆಯಲ್ಲಿ ಮಾತನಾಡಿದ ಕನ್ನಡಪರ ಹೋರಾಟಗಾರ ಭೈರಪ್ಪ ಹರೀಶ್‍ಕುಮಾರ್, ಜನರು ಈಗ ಜಾಗೃತರಾಗಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇ ಬೇಕು ಎನ್ನುವುದು ಜನರ ಮನಸ್ಸಿನಲ್ಲಿದೆ. ಬೆಂಗಳೂರಿನಿಂದ ಧರ್ಮಸ್ಥಳದ ವರೆಗೆ ರ್ಯಾಲಿ ನಡೆಸಿ, ಧರ್ಮಸ್ಥಳದಲ್ಲಿ ಸಮಾವೇಶ ನಡೆಸಬೇಕು. ಈ ಸಂದರ್ಭದಲ್ಲಿ ನಾವು ಕಾಲಹರಣ ಮಾಡಬಾರದು ಎಂದು ತಿಳಿಸಿದರು.
ಪತ್ರಕರ್ತ ಡಾ.ಸಿದ್ದನಗೌಡ ಪಾಟೀಲ್ ಮಾತನಾಡಿ, ‘ಇವತ್ತು ನಾವು ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕಿದೆ. ಸಮೀರ್ ಎನ್ನುವ ಮುಸ್ಲಿಂ ಹುಡುಗ ವಿಡಿಯೋ ಮಾಡಿರುವುದರಿಂದ ಸತ್ಯ ಬಹಳ ಘೋರಾವಾಗಿ ಕಾಣುತ್ತಿದೆ. ಸತ್ಯವನ್ನು ಹೇಳಲು ಕೂಡ ಜಾತಿ-ಧರ್ಮಗಳನ್ನು ಅಂಟಿಸಲಾಗುತ್ತಿದೆ. ಧರ್ಮಸ್ಥಳದ ಬಗ್ಗೆ ಯಾರು ಮಾತಾಡುತ್ತಿಲ್ಲ. ಆದರೆ ಅಲ್ಲಿನ ಯಾವುದೋ ವ್ಯಕ್ತಿ ಕೆಟ್ಟ ಕೆಲಸ ಮಾಡಿದಾಗ ಅದರ ಬಗ್ಗೆಯೂ ಮಾತಾಡಬಾರದು ಎನ್ನುವುದು ಅಪರಾಧವಾಗುತ್ತದೆ’ ಎಂದರು.
ಮುಂದಿನ ದಿನಗಳಲ್ಲಿ ಒಟ್ಟು ರಾಜ್ಯದಲ್ಲಿ ಧರ್ಮದ ಹೆಸರಿನಲ್ಲಿ ಜನರ ನಂಬಿಕೆ ಹೆಸರಿನಲ್ಲಿ ದುರುಪಯೋಗ ಮಾಡಿಕೊಳ್ಳುತ್ತಿರುವ ಅಪರಾಧಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕಾಗಿದೆ. ಆವಾಗ ಪೊಲೀಸರು ಮತ್ತೆ ಅಡ್ಡಿ ಮಾಡುತ್ತಾರೆ. ಯಾಕೆಂದರೆ ಪೊಲೀಸರಿಗೆ ಮೇಲೆ ಖಾಕಿ ಇದ್ದರೆ ಒಳಗಡೆ ಕೇಸರಿ ಇರುವ ಹಲವು ಪೊಲೀಸರು ಇದ್ದಾರೆ ಎಂದು ಹೇಳಿದರು.
ಅಂಕಣಕಾರ ಶಿವಸುಂದರ್ ಮಾತನಾಡಿ, ಅಧಿಕಾರ ಕೇಂದ್ರ, ನ್ಯಾಯದ ಕೇಂದ್ರದಿಂದ ನ್ಯಾಯವನ್ನು ಪಡೆಯಬೇಕು. ನಾವು ಇಡುವ ಪ್ರತಿ ಹೆಜ್ಜೆಯೂ ದೊಡ್ಡ ಮಟ್ಟದಲ್ಲಿ ಇರಬೇಕು. ತಾಲೂಕು ಕೇಂದ್ರಗಳಿಂದ ಕೂಡ ಪ್ರವಾಹದ ರೀತಿಯಲ್ಲಿ ಜನರು ಹರಿದು ಬರಬೇಕು. ನಿರಂತರವಾಗಿ ನ್ಯಾಯದ ಕೂಗು ಇರಬೇಕು ಎಂದು ತಿಳಿಸಿದರು.
ಇನ್ನೊಂದು ಬಾರಿ ಸಭೆ ನಡೆಸಿ, ರ್‍ಯಾಲಿಯ ದಿನಾಂಕ ಹಾಗೂ ರ್‍ಯಾಲಿಯ ರೂಪುರೇಷೆಯ ಬಗ್ಗೆ ಚರ್ಚಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಕಾರ್ಮಿಕ ಹೋರಾಟಗಾರ ಎಚ್.ವಿ.ಅನಂತ ಸುಬ್ಬರಾವ್, ಪತ್ರಕರ್ತರಾದ ನವೀನ್ ಸೂರಿಂಜೆ, ದೊಡ್ಡಿಪಾಳ್ಯ ನರಸಿಂಹಮೂರ್ತಿ, ವಕೀಲೆ ಮೈತ್ರೇಯಿ, ರಾಜಶೇಖರ್ ಅಕ್ಕಿ, ರಘುನಂದನ್ ಮತ್ತಿತರರು ಹಾಜರಿದ್ದರು.
‘ಕರ್ನಾಟಕದಲ್ಲಿ ಸಂವಿಧಾನ ಅನುಸರಿಸುತ್ತೇವೆ ಎಂದು ಸರಕಾರ ಹೇಳುತ್ತದೆ. ಇನ್ನೊಂದು ಕಡೆ ಕಚೇರಿಯಲ್ಲಿ ಸಭೆ ಮಾಡಿದರು ಕೂಡ ಬಂಧಿಸುತ್ತೇವೆ ಎಂದು ಪೊಲೀಸರು ಹೇಳುತ್ತಾರೆ. ಇದು ಬರಿ ಸೌಜನ್ಯ ವಿಷಯ ಮಾತ್ರವಲ್ಲ. ಊಳಿಗಮಾನ್ಯ ಪದ್ಧತಿ ವಿರುದ್ಧ ನಾವು ಹೋರಾಟ ಮಾಡಬೇಕಾಗುತ್ತದೆ. ಧರ್ಮಸ್ಥಳದಲ್ಲಿ ಅನೇಕ ಪ್ರಕರಣಗಳಿವೆ. ‘ಧರ್ಮಸ್ಥಳ ಫೈಲ್ಸ್’ ಎಂದೇ ಹೇಳಬಹುದು’
-ವಿನಯ್ ಶ್ರೀನಿವಾಸ್, ವಕೀಲ