ಬೆಂಗಳೂರು | ಕೇಂದ್ರ ಸಚಿವ ಎಚ್‍ಡಿಕೆ ಕುಟುಂಬಕ್ಕೆ ಸೇರಿದ 9 ಎಕರೆ ಒತ್ತುವರಿ ತೆರವು

ಬೆಂಗಳೂರು: ಹೈಕೋರ್ಟ್ ಆದೇಶದ ಬೆನ್ನಲ್ಲೇ ಭೂ ಒತ್ತುವರಿ ಮಾಡಿಕೊಂಡ ಆರೋಪದ ಮೇಲೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕುಟುಂಬಕ್ಕೆ ಸೇರಿದ 9 ಎಕರೆ ಜಮೀನನ್ನು ರಾಜ್ಯ ಸರಕಾರ ತೆರವುಗೊಳಿಸಿ ವಶಕ್ಕೆ ಪಡೆದಿದೆ.
ಇಲ್ಲಿನ ರಾಮನಗರಜಿಲ್ಲೆ ಬಿಡದಿಯ ಕೇತಗಾನಹಳ್ಳಿಯಲ್ಲಿ ರುವ ಸರ್ವೆ ನಂ.7, 8, 9, 10, 16, 17 ಮತ್ತು 79ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಕುಟುಂಬವು ಹಾಗೂ ಇತರರು 14 ಎಕರೆ ಸರಕಾರ ಜಮೀನನ್ನು ಭೂ ಒತ್ತುವರಿ ಮಾಡಿಕೊಂಡಿದ್ದರು ಎಂಬ ಆರೋಪ ಇದೆ.
ಇದರ ನಡುವೆ ಮಂಗಳವಾರ ರಾಮನಗರ ಜಿಲ್ಲಾ ಎಸ್ಪಿ ಶ್ರೀನಿವಾಸ ಗೌಡ, ಜಿಲ್ಲಾಧಿಕಾರಿ ಯಶವಂತ.ವಿ.ಗುರುಕರ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಹಾಗೂ ಸ್ಥಳೀಯ ಪೊಲೀಸರ ನೆರವಿನಿಂದ ಜಮೀನನ್ನು ತೆರವುಗೊಳಿಸಲಾಗಿದೆ.
ಒಂದು ವೇಳೆ ನಾನು ಕಾನೂನು ಬಾಹಿರವಾಗಿ ಭೂ ಒತ್ತುವರಿ ಮಾಡಿಕೊಂಡಿದ್ದರೆ ತೆರವುಗೊಳಿಸಬಹುದೆಂದು ಸ್ವತಃ ಎಚ್.ಡಿ.ಕುಮಾರಸ್ವಾಮಿ ಸ್ವತಃ ಕಂದಾಯ ಇಲಾಖೆಗೆ ಪತ್ರ ಬರೆದಿದ್ದರು. ಇನ್ನೂ, ನಾವು ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಲಿದ್ದೇವೆ. ಅದಕ್ಕೂ ಮುನ್ನ ಹೈಕೋರ್ಟ್‍ಗೆ ಮುಚ್ಚಿದ ಲಕೋಟಿಯಲ್ಲಿ ವರದಿ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಏನಿದು ಪ್ರಕರಣ?: ಕುಮಾರಸ್ವಾಮಿ ಹಾಗೂ ಇತರರು ಸರಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದರು ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಸರಕಾರ ವಿಶೇಷ ತನಿಖಾ ದಳ(ಎಸ್‍ಐಟಿ) ರಚನೆ ಮಾಡಿತ್ತು.ಅದರಂತೆ ತನಿಖಾತಂಡ ಕೇತಗಾನಹಳ್ಳಿ ಸುತ್ತಮುತ್ತ ತನಿಖೆ ನಡೆಸಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಎಚ್.ಡಿ.ಕುಮಾರಸ್ವಾಮಿ, ಮಾಜಿ ಶಾಸಕ ಡಿ.ಸಿ.ತಮಣ್ಣ ಮತ್ತಿತರರು ಸರಕಾರಿ ಜಮೀನನ್ನು ಭೂ ಒತ್ತುವರಿ ಮಾಡಿಕೊಂಡಿದ್ದಾರೆಂದು ಹೈಕೋರ್ಟ್‍ಗೆ ವರದಿ ಸಲ್ಲಿಸಿತ್ತು.
ಕುಮಾರಸ್ವಾಮಿ ಹಾಗೂ ಇತರರ ವಿರುದ್ಧ ಭೂ ಒತ್ತುವರಿ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಹೈಕೋರ್ಟ್ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಆದರೆ ಅಧಿಕಾರಿಗಳು ವಿಳಂಬ ಮಾಡಿದ್ದರಿಂದ ಹೈಕೋರ್ಟ್ ಕೆಂಡಾಮಂಡಲವಾಗಿತ್ತು. ಅಲ್ಲದೆ ಪ್ರಕರಣದಲ್ಲಿನ ಎಲ್ಲಾ ಆರೋಪಿಗಳನ್ನೂ ಬ್ರೈನ್ ಮ್ಯಾಪಿಂಗ್‍ಗೆ ಒಳಪಡಿಸಲು ಆದೇಶಿಸಿದರೆ ಸತ್ಯ ಹೊರಬರಲಿದೆ ಎಂದು ಹೇಳಿತ್ತು.
ಕಾನೂನು ಹೋರಾಟ ಮಾಡುವೆ: ‘ನಾನು ನನ್ನ ಜೀವನದಲ್ಲಿ ಯಾವುದೇ ಆಕ್ರಮಗಳನ್ನು ಎಸಗಿಲ್ಲ. ನಲವತ್ತು ವರ್ಷಗಳ ಹಿಂದೆ ಖರೀದಿ ಮಾಡಿರುವ ಭೂಮಿ ಅದಾಗಿದ್ದು, ಈ ಸರಕಾರದ ಷಡ್ಯಂತ್ರ್ಯದ ವಿರುದ್ಧ ಕಾನೂನು ವ್ಯಾಪ್ತಿಯಲ್ಲಿಯೇ ಹೋರಾಟ ನಡೆಸುತ್ತೇನೆ’
-ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ
‘ಕೇಂದ್ರ ಸಚಿವ ಕುಮಾರಸ್ವಾಮಿ ಭೂಮಿ ಒತ್ತುವರಿ ಮಾಡಿಕೊಂಡಿಲ್ಲ ಎಂದರೆ ಮಾಡಿಕೊಂಡಿಲ್ಲ, ಜಮೀನು ಕದ್ದಿಲ್ಲ ಎಂದರೆ ಕದ್ದಿಲ್ಲ. ಎಲ್ಲಕ್ಕೂ ಅಳತೆ, ದಾಖಲೆ ಇರುತ್ತದೆ ಅಲ್ಲವೇ? ಇದಕ್ಕೂ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಗೂ ಏನು ಸಂಬಂಧ?, ಕುಮಾರಸ್ವಾಮಿ ಏಕೆ ಗಾಬರಿಯಾಗಬೇಕು?. ನಾನು ಹಾಗೂ ಸಿದ್ದರಾಮಯ್ಯ ಎಂದಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಕೋರ್ಟ್ ಹೇಳಿದಂತೆ ಕಾನೂನು ಪ್ರಕಾರ ಕೆಲಸ ಮಾಡಲಾಗಿದೆ. ಕೇತಗಾನಹಳ್ಳಿ ಸುದ್ದಿಗೆ ನಾವು ಹೋಗಿಲ್ಲ. ಭೂ ಒತ್ತುವರಿ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ ಎಂದು ಕೋರ್ಟ್ ಅಧಿಕಾರಿಗಳಿಗೆ ಛೀಮಾರಿ ಹಾಕಿದೆ. ಹೀಗಾಗಿ ಕೋರ್ಟ್ ಗಡವು ನೀಡಿದ ಕಾರಣಕ್ಕೆ ಅಧಿಕಾರಿಗಳು ಹೋಗಿ ಸರ್ವೆ ಮಾಡಿದ್ದಾರೆ’
-ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ