20,375 ಸರಕಾರಿ ಶಾಲೆಗಳಲ್ಲಿ 35ಕ್ಕಿಂತ ಕಡಿಮೆ ವಿದ್ಯಾರ್ಥಿಗಳು : ಅರವಿಂದ ಬೆಲ್ಲದ್

Update: 2025-03-18 20:52 IST
20,375 ಸರಕಾರಿ ಶಾಲೆಗಳಲ್ಲಿ 35ಕ್ಕಿಂತ ಕಡಿಮೆ ವಿದ್ಯಾರ್ಥಿಗಳು : ಅರವಿಂದ ಬೆಲ್ಲದ್
  • whatsapp icon

ಬೆಂಗಳೂರು : ರಾಜ್ಯದಲ್ಲಿ 57 ಸಾವಿರಕ್ಕೂ ಹೆಚ್ಚು ಸರಕಾರಿ ಶಾಲೆಗಳಿವೆ. ಈ ಪೈಕಿ 20,375 ಸರಕಾರಿ ಶಾಲೆಗಳಲ್ಲಿ 35ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ ಎಂದು ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್ ಹೇಳಿದರು.

ಮಂಗಳವಾರ ವಿಧಾನಸಭೆಯಲ್ಲಿ 2025-26ನೇ ಸಾಲಿನ ರಾಜ್ಯ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಸರಕಾರಿ ಶಾಲೆಗಳಲ್ಲಿ ಫೇಸ್ ರೆಕಗ್ನಿಶೇಷನ್ ಅಟೆಂಡೆನ್ಸ್ ವ್ಯವಸ್ಥೆ ಜಾರಿಗೆ ತರುವುದಾಗಿ ಶಿಕ್ಷಣ ಸಚಿವರು ಹೇಳಿದ್ದಾರೆ. ಈ ವ್ಯವಸ್ಥೆ ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲ, ಶಿಕ್ಷಕರಿಗೂ ತರಬೇಕು ಎಂದು ತಿಳಿಸಿದರು.

ಸರಕಾರಿ ಶಾಲೆಯ ಒಬ್ಬ ವಿದ್ಯಾರ್ಥಿಗೆ ಸರಕಾರ ವಾರ್ಷಿಕ 90 ಸಾವಿರ ರೂ.ಗಳನ್ನು ಖರ್ಚು ಮಾಡುತ್ತದೆ. ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗೆ ಸೇರುವ ವಿದ್ಯಾರ್ಥಿಗೆ 12 ಸಾವಿರ ರೂ.ಗಳನ್ನು ಖರ್ಚು ಮಾಡಲಾಗುತ್ತದೆ. ಸರಕಾರಿ ಶಾಲೆ ಇರುವ ವಾರ್ಡ್‍ನಲ್ಲಿ ಆರ್‌ಟಿಇ ಅಡಿ ದಾಖಲಾತಿಗೆ ಅವಕಾಶ ಇಲ್ಲ ಎಂದು ಹಿಂದಿನ ಸಿದ್ದರಾಮಯ್ಯ ಸರಕಾರ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿತು. ಇದರಿಂದ, ಬಡವರ ಮಕ್ಕಳು ಆರ್‌ಟಿಇ ಅಡಿ ಪ್ರವೇಶ ಪಡೆಯಲು ಕಷ್ಟವಾಗುತ್ತಿದೆ. ಸರಕಾರ ಈ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಅವರು ತಿಳಿಸಿದರು.

ಕೌಶಲ್ಯಾಭಿವೃದ್ಧಿ ಕೇಂದ್ರಗಳು ಇಡೀ ದೇಶದಲ್ಲಿ ದೊಡ್ಡ ವಂಚನೆಯ ಜಾಲವನ್ನು ಹೊಂದಿವೆ. ಗಡಿ ಪ್ರದೇಶದಲ್ಲಿ ಚೆಕ್ ಪೋಸ್ಟ್‌ ಗಳು ಇರಬಾರದು ಎಂದು ಕೇಂದ್ರ ಸರಕಾರ ತಿಳಿಸಿದ್ದರೂ ನಮ್ಮ ರಾಜ್ಯದಲ್ಲಿ ಚೆಕ್ ಪೋಸ್ಟ್‌ ಗಳನ್ನು ಉಳಿಸಿಕೊಳ್ಳಲಾಗಿದೆ. ಇದು ದೊಡ್ಡ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತಿದೆ. ಎಸ್.ಸಿ, ಎಸ್.ಟಿ, ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಹಾಸ್ಟೆಲ್‍ಗಳನ್ನು ಮಾಡುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಹೊಸ ದಲಿತ ಕೇರಿಗಳಂತೆ ಆಗುತ್ತಿದೆ ಎಂದು ಅರವಿಂದ ಬೆಲ್ಲದ್ ದೂರಿದರು.

ರಾಜ್ಯದ ಬಜೆಟ್ ಅನ್ನು ಹಲಾಲ್ ಬಜೆಟ್ ಎಂದು ಟೀಕಿಸಿದ ಅರವಿಂದ ಬೆಲ್ಲದ್ ವಿರುದ್ಧ ಕಿಡಿಗಾರಿದ ಸಚಿವ ಪ್ರಿಯಾಂಕ್ ಖರ್ಗೆ, 4.09 ಲಕ್ಷ ಕೋಟಿ ರೂ.ಗಳ ಬಜೆಟ್‍ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 4 ಸಾವಿರ ಕೋಟಿ ರೂ. ನೀಡಿದರೆ ಹಲಾಲ್ ಬಜೆಟಾ? ಯಾವ ರೀತಿ ಇದು ಹಲಾಲ್ ಬಜೆಟ್ ಎಂದು ವಿವರಣೆ ನೀಡಲಿ. ಕೇಂದ್ರದಲ್ಲಿ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆಯನ್ನು ಇಟ್ಟುಕೊಂಡಿದ್ದಾರೆ. ರದ್ದು ಮಾಡಲಿ ಅದನ್ನು, ಮೌಲಾನಾ ಆಝಾದ್ ಅಭಿವೃದ್ಧಿ ನಿಗಮಕ್ಕೆ 1000 ಕೋಟಿ ರೂ.ಕೊಟ್ಟಿದ್ದಾರೆ. ಅದನ್ನು ಏನು ಹೇಳಬೇಕು. ವಿಪಕ್ಷದ ಉಪ ನಾಯಕರು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News