ಕೃಷ್ಣಾ ಮೇಲ್ದಂಡೆ 3ನೆ ಹಂತದ ಯೋಜನೆ ಜಾರಿಗೆ 87,818 ಸಾವಿರ ಕೋಟಿ ರೂ. ಬೇಕು: ಡಿ.ಕೆ.ಶಿವಕುಮಾರ್

ಬೆಂಗಳೂರು : ಬಸವರಾಜ ಬೊಮ್ಮಾಯಿ ಸರಕಾರದಲ್ಲಿನ ಹಳೆಯ ಲೆಕ್ಕಗಳನ್ನು ತೆಗೆದುಕೊಂಡರೆ ಕೃಷ್ಣ ಮೇಲ್ದಂಡೆ 3ನೆ ಹಂತದ ಜಾರಿಗೆ ಅಂದಾಜು ರೂ.87,818 ಸಾವಿರ ಕೋಟಿ ಹಣ ಬೇಕಾಗುತ್ತದೆ. ಪ್ರಸ್ತುತ ಪರಿಷ್ಕರಣೆ ಮಾಡಿದರೆ ವೆಚ್ಚ ಇನ್ನೂ ಹೆಚ್ಚಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಗುರುವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಪಿ.ಎಚ್.ಪೂಜಾರ್ ಅವರು ಕೃಷ್ಣಾ ಮೇಲ್ದಂಡೆ ಯೋಜನೆಯ 3ನೆ ಹಂತ ಯೋಜನೆಗೆ ಒಂದೇ ಹಂತದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಸಣ್ಣ ಹಾಗೂ ದೊಡ್ಡ ನೀರಾವರಿ ಈ ಎರಡೂ ಇಲಾಖೆಗಳ ಬಜೆಟ್ ಇರುವುದೇ 22 ಸಾವಿರ ಕೋಟಿ ರೂ.ಗಳಾಗಿದೆ. ಆದರೂ ಈ ಯೋಜನೆ ಜಾರಿಗೆ ನಾವು ಬದ್ಧವಾಗಿದ್ದೇವೆ. ಕೇಂದ್ರ ಜಲಶಕ್ತಿ ಸಚಿವರನ್ನು ಈಗಾಗಲೇ ದಿಲ್ಲಿಯಲ್ಲಿ ಭೇಟಿಯಾಗಿ ಯೋಜನೆ ಅನುಮೋದನೆಗೆ ಮನವರಿಕೆ ಮಾಡಿದ್ದೇವೆ. ಇದಕ್ಕೂ ಮುಂಚಿತವಾಗಿ ಕಾನೂನಿನ ಚೌಕಟ್ಟಿನಲ್ಲಿ ಏನೇನು ಮಾಡಬೇಕು ಎಂದು ನಾವು ಆಲೋಚನೆ ಮಾಡಿದ್ದೇವೆ ಎಂದು ಹೇಳಿದರು.
ಈಗಾಗಲೇ 75,563 ಎಕರೆ ಸಬ್ ಮರ್ಜ್ ಆಗಿದೆ, 2,543 ಎಕರೆ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. 29,568 ಎಕರೆ ಭೂಮಿ ವಿವಿಧ ಹಂತಗಳಲ್ಲಿದೆ. 43,452 ಎಕರೆ ಭೂಮಿ ಸ್ವಾಧೀನಕ್ಕೆ ಒಳಪಡಬೇಕಿದೆ. ಆರ್.ಸಿ ಭೂಮಿಗೆ 6,467 ಎಕರೆ ಬೇಕಾಗಿದೆ. ಇದರಲ್ಲಿ ಶೇ.50 ರಷ್ಟು ಎಂದರೆ 3,392 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇದರಲ್ಲಿ ವಿವಿಧ ಹಂತಗಳಲ್ಲಿ 2,600 ಎಕರೆಯಿದ್ದು, 471 ಎಕರೆ ಬಾಕಿ ಉಳಿದಿದೆ. ಫಾರ್ಮೇಶನ್ ಆಫ್ 24 ಆರ್ ಸಿ ವಿಲೇಜ್ ಅಡಿ 4,636 ಎಕರೆ, ವಿವಿಧ ಹಂತಗಳಲ್ಲಿ 2,500 ಮತ್ತು 1,886 ಎಕರೆ ಬಾಕಿಯಿದೆ. ಕಾಲುವೆ ಜಾಲ ನಿರ್ಮಾಣಕ್ಕೆ 1,33,867 ಎಕರೆ ಬೇಕಾಗಿದೆ. ಇದರಲ್ಲಿ ಈಗಾಗಲೇ 51 ಸಾವಿರ ಎಕರೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಸರಕಾರದ ಬಳಿ ವಿವಿಧ ಹಂತಗಳಲ್ಲಿ 22,962 ಎಕರೆ ಭೂಮಿ ಇದೆ ಎಂದು ಅಂಕಿ-ಅಂಶಗಳನ್ನು ಅವರು ಸದನದ ಮುಂದಿಟ್ಟರು.
ಒಂದಷ್ಟು ಭೂಮಿಗೆ 10- 12 ಕೋಟಿ ರೂ. ಪರಿಹಾರ ನೀಡಬೇಕು ಎಂದು ನ್ಯಾಯಲಯ ಆದೇಶಿಸಿದೆ. ಇದರ ಬಗ್ಗೆಯೂ ಆಲೋಚನೆ ಮಾಡಬೇಕಿದೆ. ಭೂಸ್ವಾಧೀನಕ್ಕೆ ಅನುಮೋದನೆ ದೊರೆಯದೇ ಹೋದರೂ, ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿ ಎನ್ನುವುದು ಅನೇಕರ ಒತ್ತಡವಾಗಿದೆ. ಇದನ್ನು ಸರಕಾರವೂ ಒಪ್ಪುತ್ತದೆ. ಆ ಭಾಗದ ಜನಪ್ರತಿನಿಧಿಗಳು ಸೇರಿದಂತೆ ನಾವೆಲ್ಲರೂ ಸೇರಿ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. ಆದರೆ ಇದು ಸರಕಾರದ ದಾಖಲೆಗೆ ಬರಬೇಕು. ಇದಾದ ನಂತರ ಹಣಕಾಸು ಇಲಾಖೆ, ಕಾನೂನು ಇಲಾಖೆಯ ಅಭಿಪ್ರಾಯ ಕೇಳಬೇಕು ಎಂದು ಅವರು ಹೇಳಿದರು.