ಒಳಮೀಸಲಾತಿ | ನ್ಯಾ.ನಾಗಮೋಹನ್ ದಾಸ್ ಆಯೋಗ ಮಧ್ಯಂತರ ವರದಿ ಅಂಗೀಕರಿಸಿದ ಸಚಿವ ಸಂಪುಟ

Update: 2025-03-27 18:04 IST
ಒಳಮೀಸಲಾತಿ | ನ್ಯಾ.ನಾಗಮೋಹನ್ ದಾಸ್ ಆಯೋಗ ಮಧ್ಯಂತರ ವರದಿ ಅಂಗೀಕರಿಸಿದ ಸಚಿವ ಸಂಪುಟ
  • whatsapp icon

ಬೆಂಗಳೂರು : ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗವು ರಾಜ್ಯ ಸರಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯನ್ನು ಸಚಿವ ಸಂಪುಟ ಗುರುವಾರ ಅಂಗೀಕರಿಸಿದೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ನ್ಯಾ.ನಾಗಮೋಹನ್ ದಾಸ್ ಆಯೋಗವು ಒಳ ಮೀಸಲಾತಿ ಕುರಿತು ಪ್ರಮುಖವಾಗಿ ನಾಲ್ಕು ಶಿಫಾರಸ್ಸುಗಳನ್ನು ಮಾಡಿದೆ ಎಂದು ಹೇಳಿದರು.

ಶಿಫಾರಸ್ಸುಗಳು: ‘ರಾಜ್ಯದಲ್ಲಿನ ಪರಿಶಿಷ್ಟ ಜಾತಿಯಲ್ಲಿರುವ ಉಪ ಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ಹೊಸದಾದ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸಬೇಕು. ಆಧುನಿಕ ವಿಜ್ಞಾನ, ತಂತ್ರಜ್ಞಾನ ಸಾಧನಗಳನ್ನು ಬಳಸಿ 30-40 ದಿನಗಳಲ್ಲಿ ಹೊಸದಾಗಿ ಸಮೀಕ್ಷೆ ನಡೆಸಬೇಕೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ’ ಎಂದು ಎಚ್.ಕೆ.ಪಾಟೀಲ್ ಹೇಳಿದರು.

‘ಹೊಸ ಸಮೀಕ್ಷೆ ನಡೆಸಲು ಅಗತ್ಯವಿರುವ ಪ್ರಶ್ನಾವಳಿ ಸಿದ್ಧಪಡಿಸಬೇಕು. ಯಾವ ಸಂಸ್ಥೆಯಿಂದ ಸಮೀಕ್ಷೆ ನಡೆಸಬೇಕು. ಸಮೀಕ್ಷೆ ಮಾಡುವ ಸಿಬ್ಬಂದಿ, ತರಬೇತಿಗೆ ಅಗತ್ಯ ಸಂಪನ್ಮೂಲ ಕ್ರೋಢೀಕರಣ ಹಾಗೂ ಸಿದ್ಧತೆಗಳನ್ನು ನೋಡಿಕೊಳ್ಳಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕು’ ಎಂದು ಎಚ್.ಕೆ. ಪಾಟೀಲ್ ಅವರು ತಿಳಿಸಿದರು.

ಹೊಸ ಸಮೀಕ್ಷೆಯಿಂದ ಸಂಗ್ರಹಿಸುವ ದತ್ತಾಂಶದ ಆಧಾರದ ಮೇಲೆ ಈ ವರದಿಯಲ್ಲಿ ತಿಳಿಸಿರುವ ಮಾನದಂಡಗಳಂತೆ ಪರಿಶಿಷ್ಟ ಜಾತಿಯ ಉಪ ಜಾತಿಗಳ ವರ್ಗೀಕರಣ ಮಾಡಿ ಲಭ್ಯವಿರುವ ಮೀಸಲಾತಿ ಪ್ರಮಾಣವನ್ನು ಆದ್ಯತೆಯ ಮೇರೆಗೆ ಹಂಚಿಕೆ ಮಾಡಬೇಕು ಎಂದು ಆಯೋಗವು ಶಿಫಾರಸ್ಸು ಮಾಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಹೊಸದಾಗಿ ಸಮೀಕ್ಷೆ ಮಾಡಿ, ದತ್ತಾಂಶ ಸಂಗ್ರಹಿಸುವ ಜವಾಬ್ದಾರಿಯನ್ನು ನಾಗಮೋಹನ್ ದಾಸ್ ನೇತೃತ್ವದ ಆಯೋಗಕ್ಕೆ ವಹಿಸಲು ಉದ್ದೇಶಿಸಲಾಗಿದೆ. ಈ ಕಾರ್ಯ ಮುಗಿಸಲು 40 ದಿನಗಳು ಬೇಕಾಗುತ್ತದೆ ಎಂದು ನಾಗಮೋಹನ್ ದಾಸ್ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ನಾವು 60 ದಿನಗಳಲ್ಲಿ ಈ ಕಾರ್ಯ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಿ, ಆಯೋಗದ ಅವಧಿಯನ್ನು ಎರಡು ತಿಂಗಳ ವರೆಗೆ ವಿಸ್ತರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಹೊಸ ತಂತ್ರಜ್ಞಾನ ಬಳಸಿ 40 ದಿನಗಳಲ್ಲಿ ಸಮೀಕ್ಷೆ ಮಾಡಬಹುದು ಎಂದು ಆಯೋಗ ತಿಳಿಸಿದೆ. ರಾಜ್ಯದಲ್ಲಿ ಸುಮಾರು ಆರು ಸಾವಿರ ಪಂಚಾಯಿತಿಗಳು, 300ಕ್ಕೂ ಹೆಚ್ಚು ನಗರ ಸಭೆ, ಪುರಸಭೆಯ ವಾರ್ಡ್‍ಗಳಿವೆ. ಅಲ್ಲಿ ಜಿಲ್ಲಾಧಿಕಾರಿ, ಪಾಲಿಕೆಯ ಆಯುಕ್ತರು, ಕಾರ್ಯದರ್ಶಿಗಳು ಪಿಡಿಒ ಹಾಗೂ ಇಒಗಳು ಸೇರಿ ಸಮೀಕ್ಷೆ ಮಾಡಲು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಇಂದು ಸಭೆಯನ್ನು ಕರೆಯಲಾಗಿದೆ ಎಂದು ಹೇಳಿದರು.

ಸಮರೋಪಾದಿಯಲ್ಲಿ ಈ ಕೆಲಸ ಮುಗಿಸಬೇಕು ಎಂದು ಸಚಿವ ಸಂಪುಟ ನಿರ್ಧರಿಸಿದೆ. ಆಯೋಗ ಬಯಸಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಇದರಲ್ಲಿ ಕಾಲಹರಣ ಏನು ಇಲ್ಲ. ನಮ್ಮ ಸರಕಾರ, ಪಕ್ಷ ಒಳ ಮೀಸಲಾತಿಗೆ ಬದ್ಧವಾಗಿದೆ. ಆಂಧ್ರ, ತೆಲಂಗಾಣ ಹಾಗೂ ಹರಿಯಾಣದಲ್ಲಿ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ. ನಮ್ಮ ರಾಜ್ಯದಲ್ಲಿ ಆ ರೀತಿ ಆಗಬಾರದು ಎಂಬುದು ನಮ್ಮ ಉದ್ದೇಶ ಎಂದು ಮಹದೇವಪ್ಪ ತಿಳಿಸಿದರು.

ಈ ಹಿಂದೆ ನಡೆಸಲಾಗಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ(ಜಾತಿ ಜನಗಣತಿ) ವರದಿಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ, ಎಸ್.ಸಿ ವರ್ಗಗಳ ಮಾಹಿತಿಗಳು ಇಲ್ಲ. ಈ ದತ್ತಾಂಶಗಳಿಲ್ಲದೆ ಹೋದರೆ ಕಾನೂನಿನಡಿ ಮಾನ್ಯವಾಗಲು ಸಾಧ್ಯವಾಗುವುದಿಲ್ಲ. ಆದುದರಿಂದ, ಎರಡು ತಿಂಗಳ ಕಾಲಾವಧಿಯಲ್ಲಿ ಹೊಸದಾಗಿ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಹದೇವಪ್ಪ ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News