‘ಒಳಮೀಸಲಾತಿ ಜಾರಿ’ಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಪ್ರಿಯಾಂಕ್ ಖರ್ಗೆ

Update: 2025-03-27 20:08 IST
Photo of Priyank Kharge

ಪ್ರಿಯಾಂಕ್ ಖರ್ಗೆ

  • whatsapp icon

ಬೆಂಗಳೂರು: ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿಯನ್ನು ಜಾರಿಗೊಳಿಸಲು ನಮ್ಮ ಸರಕಾರ ಬದ್ಧವಾಗಿದ್ದು, ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ವಿಧಾನಸಭೆ ಚುನಾವಣೆಗೂ ಮುನ್ನ ನಾವು ಚಿತ್ರದುರ್ಗದಲ್ಲಿ ನಡೆಸಿದ ಸಮಾವೇಶದಲ್ಲಿ ಹಾಗೂ ಪಕ್ಷದ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಘೋಷಣೆ ಮಾಡಿದ್ದೆವು. ಇದರಿಂದ ನಾವು ಹಿಂದೆ ಸರಿಯುವುದಿಲ್ಲ ಎಂದರು.

ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶದಲ್ಲಿ ರಾಜ್ಯ ಸರಕಾರ ಒಳಮೀಸಲಾತಿಯನ್ನು ಜಾರಿಗೊಳಿಸಬಹುದು. ಆದರೆ, ಅದಕ್ಕೂ ಮುನ್ನ ಪ್ರಾಯೋಗಿಕ ಅಂಕಿಅಂಶ ಅಗತ್ಯವೆಂದು ತಿಳಿಸಿದೆ. ಒಂದು ವೇಳೆ ಸೂಕ್ತ ದತ್ತಾಂಶ ಇಲ್ಲದೇ ಇದ್ದರೆ ಒಳಮೀಸಲಾತಿಯ ವಿಚಾರಕ್ಕೆ ನ್ಯಾಯಾಲಯದಲ್ಲಿ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಪ್ರಾಯೋಗಿಕ ದತ್ತಾಂಶ ಸಂಗ್ರಹಣೆಗೆ ಯಾವ ಮಾದರಿ ಅನುಸರಿಸಬೇಕು ಎಂಬುದು ಚರ್ಚೆಯಾಗುತ್ತಿದೆ. ಸಮಗ್ರವಾದ ಸಮೀಕ್ಷಾ ಅಭಿಯಾನ ಮಾಡಬೇಕೆ ಅಥವಾ ಕೇಂದ್ರ ಸರಕಾರದ ಜನಗಣತಿಯ ವರದಿಯನ್ನು ಅವಲಂಬಿಸಬೇಕೆ ಎಂಬ ಗೊಂದಲಗಳಿವೆ. ಕೇಂದ್ರ ಸರಕಾರದ ಜನಗಣತಿ ವರದಿಯಲ್ಲಿ ಉಪಜಾತಿಗಳ ನೋಂದಣಿಗೆ ಅವಕಾಶ ಸಿಗಲಿದೆಯೋ, ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ರಾಜ್ಯ ಸರಕಾರ ತನ್ನದೇ ಆದ ಸಮೀಕ್ಷೆಯನ್ನು ನಡೆಸಿ ನಿರ್ಧಾರ ತೆಗೆದುಕೊಂಡರೆ ಅದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಬಹುದು. ಆ ರೀತಿಯಾಗಬಾರದು. ಸರಕಾರದ ನಿರ್ಧಾರ ದೃಢವಾಗಿರಬೇಕು ಎಂಬ ನಿಲುವು ನಮ್ಮದು. ಈ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿದ್ದೇವೆ. ಎಲ್ಲಾ ಸಂಘಟನೆಗಳ ಜೊತೆಯೂ ಚರ್ಚೆ ನಡೆಸಿ ವಿಶ್ವಾಸಕ್ಕೆ ಪಡೆಯಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News