ಡಾ.ಬಿ.ಆರ್.ಅಂಬೇಡ್ಕರ್ ಸ್ಫೂರ್ತಿಸೌಧ ನಿರ್ಮಾಣ : ಸಚಿವ ಸಂಪುಟ ನಿರ್ಧಾರ

Update: 2025-03-27 19:39 IST
ಡಾ.ಬಿ.ಆರ್.ಅಂಬೇಡ್ಕರ್ ಸ್ಫೂರ್ತಿಸೌಧ ನಿರ್ಮಾಣ : ಸಚಿವ ಸಂಪುಟ ನಿರ್ಧಾರ
  • whatsapp icon

ಬೆಂಗಳೂರು: ಬೆಂಗಳೂರಿನ ವಿಕಾಸಸೌಧದ ಮುಂಭಾಗದಲ್ಲಿನ 25.89 ಗುಂಟೆಗಳ ಖಾಲಿ ಜಾಗದಲ್ಲಿ ‘ಡಾ.ಬಿ.ಆರ್.ಅಂಬೇಡ್ಕರ್ ಸ್ಫೂರ್ತಿಸೌಧ’ ಕಟ್ಟಡ ನಿರ್ಮಾಣ ಕಾಮಗಾರಿಯನ್ನು 87ಕೋಟಿ ರೂ. ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಲಿತ ಸಂಘಟನೆಗಳ ಬೇಡಿಕೆ ಹಿನ್ನೆಲೆಯಲ್ಲಿ ಆಡಳಿತಾತ್ಮಕ ಕಚೇರಿಗಳನ್ನು ಒಳಗೊಂಡ ಈ ಸ್ಪೂರ್ತಿ ಸೌಧವನ್ನು ಲೋಕೋಪಯೋಗಿ ಇಲಾಖೆ ಮೂಲಕ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಇತರ ನಿರ್ಣಯಗಳು: ಲೋಕಾಯುಕ್ತರ ಶಿಫಾರಸ್ಸು ಕೈ ಬಿಡಲು ನಿರ್ಧಾರ-ಮಾನ್ವಿ ತಾಲೂಕಿನ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ಮಿಶ್ರಾ, ಚಿತ್ರದುರ್ಗ ಜಿಲ್ಲಾ ಪಂಚಾಯತ್‍ನ ಹಿಂದಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಜಯರಾಮ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತರು ಮಾಡಿದ್ದ ಶಿಫಾರಸ್ಸು ಕೈ ಬಿಡಲು ಸಚಿವ ಸಂಪುಟ ನಿರ್ಧರಿಸಿದೆ.

ಸಿವಿಲ್ ದಾವೆ: ನಿವೃತ್ತ ಐಎಫ್‍ಎಸ್ ಅಧಿಕಾರಿ ಎಸ್.ಮುತ್ತಯ್ಯ ವಿರುದ್ಧದ ಇಲಾಖಾ ವಿಚಾರಣೆಯನ್ನು ವಹಿಸುವಂತೆ ಲೋಕಾಯುಕ್ತ ಮಾಡಿರುವ ಶಿಫಾರಸ್ಸನ್ನು ಕೈ ಬಿಡುವುದು ಹಾಗೂ ಅವರ ವಿರುದ್ಧ ಸಿವಿಲ್ ದಾವೆ ಹೂಡಿ ಸರಕಾರಕ್ಕೆ ಉಂಟಾಗಿರುವ 2.40 ಕೋಟಿ ರೂ.ನಷ್ಟವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಸೂಚಿಸಲು ಸಚಿವ ಸಂಪುಟ ನಿರ್ಣಯಿಸಿದೆ.

ಕೇಂದ್ರಕ್ಕೆ ವನ್ಯಜೀವಿಧಾಮ ಪ್ರಸ್ತಾಪ: ಬಂಕಾಪುರ ತೋಳ ವನ್ಯಜೀವಿಧಾಮ, ಉತ್ತಾರೆಗುಡ್ಡ ವನ್ಯಜೀವಿಧಾಮ ಮತ್ತು ಅರಸೀಕೆರೆ ಕರಡಿ ವನ್ಯಜೀವಿಧಾಮಗಳ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯಗಳೆಂದು ಘೋಷಿಸುವ ಹೊಸ ಪ್ರಸ್ತಾವನೆಗಳು ಹಾಗೂ ಭದ್ರಾ ವನ್ಯಜೀವಿಧಾಮ ಪರಿಷ್ಕೃತ ಪರಿಸರ ಸೂಕ್ಷ್ಮ ವಲಯದ ಪ್ರಸ್ತಾವನೆಯನ್ನು ಸಚಿವ ಸಂಪುಟದ ಉಪಸಮಿತಿಯ ಶಿಫಾರಸ್ಸಿನಂತೆ ಕೇಂದ್ರ ಸರಕಾರಕ್ಕೆ ಸಲ್ಲಿಸಲು ಸಚಿವ ಸಂಪುಟ ನಿರ್ಣಯಿಸಿದೆ.

ಐ.ಇ.ಸಿ. ಚಟುವಟಿಕೆಗೆ ಅನುಮೋದನೆ: 2024-25ನೇ ಸಾಲಿನಲ್ಲಿ 15ನೇ ಹಣಕಾಸು ಆಯೋಗದಡಿ ಸಾರ್ವತ್ರಿಕ ಆರೋಗ್ಯ ರಕ್ಷಣೆ ಕಾರ್ಯಕ್ರಮದಡಿಯಲ್ಲಿ ಮಾಹಿತಿ, ಶಿಕ್ಷಣ, ಸಂವಹನ (ಐಇಸಿ) ಚಟುವಟಿಕೆಗೆ ಹಂಚಿಕೆಯಾಗಿದ್ದ ಅನುದಾನದಲ್ಲಿ 7045 ಆಯುಷ್ಮಾನ್ ಆರೋಗ್ಯ ಮಂದಿರಗಳಿಗೆ ಅಗತ್ಯವಿರುವ ಅನುಬಂಧದಲ್ಲಿರುವ 59 ವಿವಿಧ ಔಷಧಿಗಳನ್ನು 16.91 ಕೋಟಿ ರೂ.ಗಳ ವೆಚ್ಚದಲ್ಲಿ ರಾಷ್ಟ್ರೀಯ ಮಟ್ಟದ ಸಮಿತಿ ಅನುಮೋದನೆ ಪಡೆಯುವ ಷರತ್ತಿಗೊಳಪಟ್ಟು ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಮುಖಾಂತರ ಖರೀದಿಸಿ ಸರಬರಾಜು ಮಾಡಲು ಸಚಿವ ಸಂಪುಟ ನಿರ್ಧರಿಸಿದೆ.

ಆಯುಷ್ ಆಸ್ಪತ್ರೆಗಳಿಗೆ ಔಷಧಿ: ರಾಷ್ಟ್ರೀಯ ಆಯುಷ್ ಅಭಿಯಾನದಡಿ 2024-25ನೇ ಸಾಲಿಗೆ ಆಯುಷ್ ಇಲಾಖೆಯ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳು ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ಆಯುಷ್ ಘಟಕಗಳಿಗೆ ಅವಶ್ಯಕವಿರುವ ಆಯುಷ್ ಔಷಧಿಗಳನ್ನು 28.36 ಕೋಟಿ ರೂ.ಗಳ ಅನುದಾನಕ್ಕೆ ಮಿತಿಗೊಳಪಡಿಸಿ ಕೆಕೆಟಿಪಿಪಿ ಕಾಯ್ದೆ ಅನ್ವಯ ಟೆಂಡರ್ ಮೂಲಕ ಸಂಗ್ರಹಿಸಿಕೊಳ್ಳಲು ಅನುಮೋದನೆ ನೀಡಲಾಗಿದೆ.

ವಸತಿ ನಿಲಯಗಳಿಗೆ ಅನುಮೋದನೆ: ಬೆಂಗಳೂರಿನಲ್ಲಿರುವ ಸರಕಾರಿ ಯುನಾನಿ ಮತ್ತು ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪುರುಷ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿಯ 11.70 ಕೋಟಿ ರೂ.ಮೊತ್ತದ ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ತೋಟಗಾರಿಕೆ ಕಾಲೇಜು: ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಅಲಮೇಲದಲ್ಲಿ ಹೊಸ ತೋಟಗಾರಿಕೆ ಕಾಲೇಜನ್ನು ಸ್ಥಾಪಿಸಲು ಹಂತ ಹಂತವಾಗಿ ಒಟ್ಟು 145.73 ಕೋಟಿ ರೂ. ಅಂದಾಜು ವೆಚ್ಚವನ್ನು ಭರಿಸಲು ಮತ್ತು 126 ಹುದ್ದೆಗಳನ್ನು ಸೃಜಿಸಿ ಭರ್ತಿ ಮಾಡಲು ಮತ್ತು ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಯ ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರದ ಮುಖಾಂತರ ಅನುಷ್ಟಾನಗೊಳಿಸಲು ಹಾಗೂ ಮೊದಲನೇ ಹಂತದಲ್ಲಿ ಆಡಳಿತ ಮತ್ತು ಶೈಕ್ಷಣಿಕ ಭವನ ನಿರ್ಮಾಣಕ್ಕಾಗಿ 39.90 ಕೋಟಿ ರೂ.ಗಳನ್ನು ವಿನಿಯೋಗಿಸಲು ಅನುಮೋದನೆ ನೀಡಲಾಗಿದೆ.

ದತ್ತಾಂಶ ನೀತಿಗೆ ಅನುಮೋದನೆ: ‘ದತ್ತಾಂಶ ಕೇಂದ್ರ ನೀತಿ 2022-2027’ರಲ್ಲಿ ಉಲ್ಲೇಖಿಸಲಾದ ವಿದ್ಯುತ್ ಸುಂಕ ಪಾಲಿಸಿಯ ಅವಧಿಯಲ್ಲಿ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೋಸೈಟಿ (ಕಿಟ್ಸ್) ಯಿಂದ /ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ನೀಡಲಾದ ವಿದ್ಯುತ್ ಸುಂಕ ಪ್ರಮಾಣಪತ್ರದ ದಿನಾಂಕದಿಂದ 5 ವರ್ಷಗಳವರೆಗೆ ಶೇ.100ರಷ್ಟು ವಿನಾಯಿತಿ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.

‘ನಿಪುಣ್ ಕರ್ನಾಟಕ’ ಮಾರ್ಗಸೂಚಿಗಳಲ್ಲಿ ಬದಲಾವಣೆ: ‘ನಿಪುಣ್ ಕರ್ನಾಟಕ’ ಯೋಜನೆಯ ಮಾರ್ಗಸೂಚಿಗಳನ್ನು ಜಾರಿಗೆ ತಂದನಂತರ ಆಸಕ್ತ ಉದ್ಯಮ ಪಾಲುದಾರರೊಂದಿಗೆ ಅನೇಕ ಸಮಾಲೋಚನೆ ನಡೆಸಲಾಯಿತು. ಉದ್ಯಮದ ನೇಮಕಾತಿ ಅವಶ್ಯಕತೆಗಳಿಗೆ ಅನುಗುಣವಾಗಿ ಪ್ರಸ್ತಾವಗಳನ್ನು ಚರ್ಚಿಸಲಾಯಿತು. ಉದ್ಯೋಗ ಗುರಿಗಳನ್ನು ಸಾಧಿಸಲು ಸ್ಪಷ್ಟವಾದ ಸಮಯಾಧಾರಿತ ವಿಧಾನದ ಮೂಲಕ ನೇಮಕಾತಿ ಚಕ್ರಗಳೊಂದಿಗೆ ಉತ್ತಮವಾಗಿ ಹೊಂದಿಕೊಳ್ಳಲು ಮತ್ತು ಉದ್ಯಮದ ಭಾಗವಹಿಸುವಿಕೆಯನ್ನು ಬಲಪಡಿಸಲು ಉದ್ಯೋಗ ಮಾನದಂಡಗಳನ್ನು ಪರಿಷ್ಕರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಮೈಸೂರಿನ ಕರ್ನಾಟಕ ಕಲಾಮಂದಿರ, ರಂಗಾಯಣ ಹಾಗೂ ವಿಶ್ವ ಕನ್ನಡ ಸಮ್ಮೇಳನ ಅತಿಥಿಗೃಹ ಕಟ್ಟಡಗಳ ಸಮಗ್ರ ನವೀಕರಣ ಕಾಮಗಾರಿಗಳನ್ನು 14.64 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಕೆ.ಕೆ.ಆರ್.ಡಿ.ಬಿ ರಸ್ತೆ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ 2024-25ನೇ ಸಾಲಿನ ಅಧ್ಯಕ್ಷರ ವಿವೇಚನಾ ನಿಧಿಯಡಿ ಕೈಗೊಳ್ಳಲಾಗುತ್ತಿರುವ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನರಿಬೋಳದಿಂದ ಗಂವ್ಹಾರ ರಸ್ತೆ ನಿರ್ಮಾಣ ಕಾಮಗಾರಿಯ 23.60 ಕೋಟಿ ರೂ. ಮತ್ತು ಕೆಲ್ಲೂರು ಬಿ ದಿಂದ ಜವಳಗಾ ಕ್ರಾಸ್ ವರೆಗೆ ರಸ್ತೆ ನಿರ್ಮಾಣ ಕಾಮಗಾರಿಯ 24.10 ಕೋಟಿ ರೂ.ಗಳ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ರಸ್ತೆ ಅಭಿವೃದ್ಧಿ: ಕೊಡಗು ಜಿಲ್ಲೆಯ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಶಾಲನಗರ ತಾಲೂಕು ಮಸಗೋಡು–ಯಲಕನೂರು-ಕಣಿವೆ ರಸ್ತೆ ಸರಪಳಿ 2 ರಿಂದ 10 ಕಿ.ಮೀ ಹಾಗೂ 11 ರಿಂದ 12.10 ಕಿ.ಮೀ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು 15 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.

ಪ್ರಜಾಸೌಧ: ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ‘ಪ್ರಜಾಸೌಧ’ ಕಟ್ಟಡ ಕಾಮಗಾರಿಗೆ ಈಗಾಗಲೇ ರೂ.9.75 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿರುವುದನ್ನು ಒಳಗೊಂಡಂತೆ, ಈ ಕಟ್ಟಡಕ್ಕೆ ಅವಶ್ಯವಿರುವ 2ನೇ ಹಂತದ ಕಾಮಗಾರಿಯ 5 ಕೋಟಿ ರೂ.ಗಳ ಅಂದಾಜು ಮೊತ್ತ ಸೇರಿದಂತೆ ಒಟ್ಟಾರೆ 14.75 ಕೋಟಿಗಳ ಪರಿಷ್ಕøತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ‘ಪ್ರಜಾಸೌಧ’ ಆನೇಕಲ್ ತಾಲ್ಲೂಕು ಆಡಳಿತ ಕೇಂದ್ರ ಕಟ್ಟಡಕ್ಕೆ ಅವಶ್ಯವಿರುವ ಎಲ್ಲಾ ಕಾಮಗಾರಿಗಳು ಒಳಗೊಂಡಂತೆ ಟೈಪ್-ಸಿ ಮಾದರಿಯಲ್ಲಿ 16 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು ಹಾಗೂ ಬೆಂಗಳೂ ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ಆಡಳಿತ ಕೇಂದ್ರ ‘ಪ್ರಜಾಸೌಧ’ ಕಟ್ಟಡಕ್ಕೆ ಅವಶ್ಯವಿರುವ ಎಲ್ಲಾ ಕಾಮಗಾರಿಗಳನ್ನು ತಲಾ 16 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಚಿಕ್ಕಮಗಳೂರು ಜಿಲ್ಲೆಯ ‘ಪ್ರಜಾಸೌಧ’ ಚಿಕ್ಕಮಗಳೂರು ಜಿಲ್ಲಾ ಆಡಳಿತ ಕೇಂದ್ರ ಕಟ್ಟಡದ ಮೊದಲನೇ ಹಂತಕ್ಕೆ 30 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಒಳಗೊಂಡಂತೆ ಆ ಕಟ್ಟಡದ ಇ.ಐ.ಆರ್.ಎಲ್/ವರ್ಕಸ್ಲಿಪ್ ಕಾಮಗಾರಿ ಹಾಗೂ 2ನೇ ಹಂತದ ಕಾಮಗಾರಿಯ ಅಂದಾಜು 26.48 ಕೋಟಿ ರೂ. ಸೇರಿದಂತೆ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ 56.48 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ನೋಂದಣಿ ಕಚೇರಿಗಳಿಗೆ ಹೊಸ ಕಟ್ಟಡ: ಬೆಂಗಳೂರಿನಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ನೋಂದಣಿ, ಉಪ ನೋಂದಣಿ ಕಚೇರಿಗಳನ್ನು ಸರಕಾರಿ ಕಟ್ಟಡಗಳಿಗೆ ಸ್ಥಳಾಂತರ, ನೂತನ ಕಟ್ಟಡ ನಿರ್ಮಾಣ, ನವೀಕರಣವನ್ನು 76 ಕೋಟಿ ರೂ.ಗಳ ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ನೋಂದಣಿ ಕಚೇರಿಗಳಲ್ಲಿ ಆಧುನಿಕ ತಂತ್ರಜ್ಞಾನ: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಗಳಲ್ಲಿ ಬಿಲ್ಡ್-ಓನ್-ಆಪರೇಟ್ ಮಾದರಿಯಲ್ಲಿ ನಿರ್ವಹಿಸುತ್ತಿರುವ ಮಾನವ ಸಂಪನ್ಮೂಲ ನಿಯೋಜನೆ ಮತ್ತು ಐಟಿ ಮೂಲಸೌಕರ್ಯಗಳ ಸ್ಥಾಪನೆ, ಕಾರ್ಯಾಚರಣೆಗಳು ಮತ್ತು ನಿರ್ವಹಣೆಯ 637.45 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಹಾಗೂ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಗೋ-ಲೈವ್‍ಗಾಗಿ ನೀಡಿದ್ದ 90 ದಿನಗಳ ಅವಧಿಯನ್ನು 464 ದಿನಗಳಿಗೆ ವಿಸ್ತರಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವವನ್ನು ನೀಗಿಸಲು ರಾಜ್ಯದ ಪ್ರಮುಖ ಜಲಾಶಯಗಳ ನಿರ್ವಹಣೆಯನ್ನು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ)ಗೆ ವಹಿಸಲು ಹಾಗೂ ರಾಜ್ಯ ವಿಪತ್ತು ಉಪಶಮನ ನಿಧಿ 194.81 ಕೋಟಿ ರೂ.ಗಳ ಅಂದಾಜು ವೆಚ್ಚದ ಒಟ್ಟು 330 ಉಪಶಮನ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಲಾಗಿದೆ.

ವಿಜಯಪುರ ಜಿಲ್ಲೆಯ ವಿಜಯಪುರ ನಗರಕ್ಕೆ ಆಲಮಟ್ಟಿ ಹಿನ್ನೀರಿನಿಂದ (ಕೊಲ್ಹಾರದಿಂದ ವಿಜಯಪುರ ನಗರಕ್ಕೆ) ಸಗಟು ನೀರು ಸರಬರಾಜು ಮಾಡುವ ಪಿಎಸ್‍ಸಿ ಕೊಳವೆ ಮಾರ್ಗವನ್ನು ಬದಲಾಯಿಸಿ ಎಮ್‍ಎಸ್ ಪೈಪ್ ಅಳವಡಿಸುವ ಕಾಮಗಾರಿಯ 50.13 ಕೋಟಿ ರೂ.ಗಳ ಅಂದಾಜಿಗೆ ಅನುಮೋದನೆ ನೀಡಲಾಗಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮೈಸೂರಿನ ಡಾ.ಬಿ.ಆರ್ ಅಂಬೇಡ್ಕರ್ ಭವನದ ಬಾಕಿ ಇರುವ ಕಾಮಗಾರಿಗಳ 23.83 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ವಿಧೇಯಕಗಳಿಗೆ ಅನುಮೋದನೆ: 2025ನೇ ಸಾಲಿನ ಕರ್ನಾಟಕ ರಾಜ್ಯ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ನಿಯಮಗಳಿಗೆ ಅನುಮೋದನೆ ನೀಡಲಾಗಿದೆ. 2025ನೇ ಸಾಲಿನ ಕರ್ನಾಟಕ ಮಂತ್ರಿಗಳ ಸಂಬಳಗಳು ಹಾಗೂ ಭತ್ತೆಗಳ (ತಿದ್ದುಪಡಿ) ವಿಧೇಯಕ, ಬೆಂಗಳೂರು ಅರಮನೆ(ಭೂ ಬಳಕೆ ಮತ್ತು ನಿಯಂತ್ರಣ) (ತಿದ್ದುಪಡಿ) ವಿಧೇಯಕ, ಡಾ.ಎಚ್.ನರಸಿಂಹಯ್ಯ ವಿಜ್ಞಾನ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕ ಹಾಗೂ ನೋಟರಿಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ, ಕರ್ನಾಟಕ ವಿಧಾನ ಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ತೆಗಳ (ತಿದ್ದುಪಡಿ) ವಿಧೇಯಕಕ್ಕೆ ಘಟನೋತ್ತರ ಅನುಮೋದನೆಗೆ ಸಚಿವ ಸಂಪುಟ ಒಪ್ಪಿದೆ.

ರಾಜ್ಯ ಸರಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಸೌಲಭ್ಯ ಒದಗಿಸುವ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಯನ್ನು ಕೆಲವು ಮಾರ್ಪಾಡುಗಳೊಂದಿಗೆ ಜಾರಿಗೊಳಿಸಲು ಸಚಿವ ಸಂಪುಟ ನಿರ್ಣಯಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News