ವಿದ್ಯುತ್ ದರ ಏರಿಕೆ | ಪ್ರತಿ ಯೂನಿಟ್‍ಗೆ 36 ಪೈಸೆ ಹೆಚ್ಚಳ ; ಪರಿಷ್ಕೃತ ದರ ಎ.1ರಿಂದ ಜಾರಿ

Update: 2025-03-27 20:21 IST
ವಿದ್ಯುತ್ ದರ ಏರಿಕೆ | ಪ್ರತಿ ಯೂನಿಟ್‍ಗೆ 36 ಪೈಸೆ ಹೆಚ್ಚಳ ; ಪರಿಷ್ಕೃತ ದರ ಎ.1ರಿಂದ ಜಾರಿ

ಸಾಂದರ್ಭಿಕ ಚಿತ್ರ

  • whatsapp icon

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ದರವನ್ನು ಪರಿಷ್ಕರಣೆ ಮಾಡಲಾಗಿದ್ದು, ಪ್ರತಿ ಯೂನಿಟ್‍ಗೆ 36 ಪೈಸೆಯನ್ನು ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ವಿದ್ಯುತ್ ದರವು ಎ.1ರಿಂದಲೇ ಅನ್ವಯವಾಗಲಿದೆ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್‍ಸಿ) ತಿಳಿಸಿದೆ.

ಗುರುವಾರ ಈ ಸಂಬಂಧ ಕೆಇಆರ್‍ಸಿ ಪ್ರಕಟನೆ ಹೊರಡಿಸಿದ್ದು, ಮೂರು ವರ್ಷಗಳ ಅವಧಿಗೆ ಸಂಬಂಧಿಸಿದಂತೆ ವಿದ್ಯುತ್ ದರವನ್ನು ಪರಿಷ್ಕರಿಸುವಂತೆ ವಿದ್ಯುತ್ ಸರಬರಾಜು ಕಂಪೆನಿಗಳು(ಎಸ್ಕಾಂ) ಪ್ರಸ್ತಾವ ಸಲ್ಲಿಸಿದ್ದವು. ಇದನ್ನು ಪರಿಗಣಿಸಿ ವಿದ್ಯುತ್ ದರವನ್ನು ಪರಿಷ್ಕರಿಸಲಾಗಿದೆ ಎಂದು ಮಾಹಿತಿ ನೀಡಿದೆ.

ರಾಜ್ಯದಲ್ಲಿರುವ ಎಲ್ಲ ಎಸ್ಕಾಂಗಳಿಗೆ ಅನ್ವಯವಾಗುವಂತೆ 2025-26ನೆ ಸಾಲಿನಲ್ಲಿ 5,256 ಕೋಟಿ ರೂ., 2026-27ರಲ್ಲಿ 6,465 ಕೋಟಿ ರೂ. ಹಾಗೂ 2027-28ರಲ್ಲಿ 8,313 ಕೋಟಿ ರೂ.ಗಳಷ್ಟು ಕಂದಾಯ ಕೊರತೆ ಉಂಟಾಗಲಿದೆ. ಹೀಗಾಗಿ ಈ ನಷ್ಟವನ್ನು ಭರಿಸಲು, ವಿದ್ಯುತ್ ಪ್ರಸರಣ, ಸಿಬ್ಬಂದಿಗಳ ಪಿಂಚಣಿ ಹಾಗೂ ಗ್ರಾಚ್ಯುಟಿ ಪಾವತಿಸಲು ವಿದ್ಯತ್ ದರ ಏರಿಕೆ ಮಾಡಲಾಗುತ್ತಿದೆ ಎಂದು ಕೆಇಆರ್‍ಸಿ ಹೇಳಿದೆ.

ಈಗಾಗಲೇ ವಸೂಲಿ ಮಾಡುತ್ತಿರುವ ಸುಂಕವನ್ನು ತರ್ಕಬದ್ದಗೊಳಿಸಲಾಗಿದೆ. ನಿಗಧಿತ ಶುಲ್ಕಗಳು ಮತ್ತು ವಿದ್ಯುತ್ ಶುಲ್ಕಗಳಲ್ಲಿನ ಸ್ಲಾಬ್‍ಗಳನ್ನು ಒಂದೇ ಹಂತಕ್ಕೆ ಸೀಮಿತಗೊಳಿಸಲಾಗಿದೆ. ಎಲ್.ಟಿ.(ಲೋ ಟೆನ್ಷನ್) ಗ್ರಾಹಕ ಪ್ರವರ್ಗಗಳಲ್ಲಿದ್ದ ಮಂಜೂರಾತಿ ವಿದ್ಯುತ್ ಹಂತಗಳನ್ನು ತೆಗೆದುಹಾಕುವ ಮೂಲಕ ಸಂಕ ರಚನೆಯನ್ನು ಸರಳೀಕರಿಸಲಾಗಿದೆ.

ಪರಿಷ್ಕೃತ ದರದ ಅನ್ವಯ, 2025-26ನೆ ಸಾಲಿನ ಎಲ್.ಟಿ. ಗ್ರಾಹಕ ಪ್ರವರ್ಗಗಳಲ್ಲಿ ಗೃಹ ಬಳಕೆ ಬಳಸುವ ವಿದ್ಯುತ್‍ನ ಸ್ಥಿರ ಶುಲ್ಕ(ಫಿಕ್ಸ್ ಚಾರ್ಜ್) 145 ರೂ.ಗಳಾಗಿದ್ದು, ಬಳಕೆ ದರವು ಪ್ರತಿ ಯೂನಿಟ್‍ಗೆ 580 ಪೈಸೆಯಾಗಿರುತ್ತದೆ. ಖಾಸಗಿ ಸಂಸ್ಥೆಗಳಲ್ಲಿ(ಶಾಲೆ, ಆಸ್ಪತ್ರೆ) ಸ್ಥಿರ ಶುಲ್ಕ 190 ರೂ.ಗಳಾಗಿದ್ದು, ಬಳಕೆ ದರವು ಪ್ರತಿ ಯೂನಿಟ್‍ಗೆ 675 ಪೈಸೆಯಾಗಿರುತ್ತದೆ. ವಾಣಿಜ್ಯ ಬಳಕೆಯಲ್ಲಿ ಸ್ಥಿರ ಶುಲ್ಕ 215 ರೂ.ಗಳಾಗಿದ್ದು, ಬಳಕೆ ದರವು ಪ್ರತಿ ಯೂನಿಟ್‍ಗೆ 700 ಪೈಸೆಯಾಗಿರುತ್ತದೆ. ಕೈಗಾರಿಕೆಯಲ್ಲಿ ಸ್ಥಿರ ಶುಲ್ಕ 150 ರೂ.ಗಳಾಗಿದ್ದು, ಬಳಕೆ ದರವು ಪ್ರತಿ ಯೂನಿಟ್‍ಗೆ 450 ಪೈಸೆಯಾಗಿರುತ್ತದೆ.

ಎಚ್.ಟಿ.(ಹೈಟೆನ್ಷನ್) ಗ್ರಾಹಕ ಪ್ರವರ್ಗಗಳ ಕೈಗಾರಿಕೆಯಲ್ಲಿ ಸ್ಥಿರ ಶುಲ್ಕ 345 ರೂ.ಗಳಾಗಿದ್ದು, ಬಳಕೆ ದರವು ಪ್ರತಿ ಯೂನಿಟ್‍ಗೆ 6.60 ರೂ., ವಾಣಿಜ್ಯ ಬಳಕೆಯಲ್ಲಿ ಸ್ಥಿರ ಶುಲ್ಕ 370 ರೂ.ಗಳಾಗಿದ್ದು, ಬಳಕೆ ದರವು ಪ್ರತಿ ಯೂನಿಟ್‍ಗೆ 5.95 ರೂ., 2026-27 ಹಾಗೂ 2027-28ನೆ ಸಾಲಿನಲ್ಲಿ ವಿದ್ಯುತ್ ಬಳಕೆಯ ದರಗಳು ಹೆಚ್ಚಳವಾಗಲಿವೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News