ಹನಿಟ್ರ್ಯಾಪ್ ಪ್ರಕರಣ : ಸಚಿವ ರಾಜಣ್ಣ ನಿವಾಸದಿಂದಲೇ ತನಿಖೆ ಆರಂಭಿಸಿದ ಸಿಐಡಿ

ಕೆ.ಎನ್.ರಾಜಣ್ಣ
ಬೆಂಗಳೂರು : ಹನಿಟ್ರ್ಯಾಪ್ ಮಾಡಿದ್ದಾರೆ ಎನ್ನಲಾದ ಪ್ರಕರಣ ಸಂಬಂಧ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಸರಕಾರಿ ನಿವಾಸದಿಂದಲೇ ಸಿಐಡಿ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಸಚಿವ ಕೆ.ಎನ್.ರಾಜಣ್ಣ ಪ್ರಕರಣಕ್ಕೆ ಸಂಬಂಧಿಸಿ ದೂರು ನೀಡಿದ್ದು, ಅದರನ್ವಯ ಗುರುವಾರ ಇಲ್ಲಿನ ಜಯಮಹಲ್ ರಸ್ತೆಯಲ್ಲಿರುವ ಸರಕಾರಿ ನಿವಾಸಕ್ಕೆ ಸಿಐಡಿ ತಂಡ ಭೇಟಿ ನೀಡಿ ಪ್ರಾಥಮಿಕ ತನಿಖೆಗೆ ಪರಿಶೀಲನೆ ನಡೆಸಿತು. ಜತೆಗೆ, ಈ ನಿವಾಸದಲ್ಲಿ ಯಾರೆಲ್ಲಾ ಇದ್ದಾರೆ, ಯಾವ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ತನಿಖೆ ನಡೆಸುವಂತೆ ಇತ್ತೀಚಿಗೆ ಸಚಿವ ರಾಜಣ್ಣ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸಲ್ಲಿಸಿದ್ದ ಮನವಿಯನ್ನು ಡಿಜಿ, ಐಜಿಪಿ ಅಲೋಕ್ ಮೋಹನ್‍ಗೆ ರವಾನೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಅಲೋಕ್ ಮೋಹನ್ ಅವರು ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದರು. ಅದರಂತೆ ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸಲು ಸಿಐಡಿ ತಂಡ ಮುಂದಾಗಿದೆ.
ಸಿಐಡಿಯವರು ಮಾಹಿತಿ ಪಡೆದುಕೊಂಡಿದ್ದಾರೆ: ರಾಜೇಂದ್ರ
ನನ್ನ ಮೇಲೆ ಯಾವುದೇ ಹನಿಟ್ರ್ಯಾಪ್ ನಡೆದಿಲ್ಲ. ತಂದೆಯವರು ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ ಆರಂಭವಾಗಿದೆ. ಬೆಂಗಳೂರಿನ ಗೆಸ್ಟ್ ಹೌಸ್ ಹಾಗೂ ತುಮಕೂರಿನಲ್ಲಿ ಇರುವ ಮನೆಗೆ ಸಿಐಡಿ ಪೊಲೀಸರು ಗುರುವಾರ ಬೆಳಿಗ್ಗೆ ಬಂದಿದ್ದರು. ಮನೆಯಲ್ಲಿ ಇದ್ದವರಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಸಚಿವ ರಾಜಣ್ಣ ಪುತ್ರ ರಾಜೇಂದ್ರ ಮಾಹಿತಿ ನೀಡಿದ್ದಾರೆ.