ಸದ್ಯದಲ್ಲೇ ಮಂಗಳೂರು ಹೊಸ ಕೇಂದ್ರ ಕಾರಾಗೃಹಕ್ಕೆ ಜೈಲು ಸ್ಥಳಾಂತರ : ಜಿ.ಪರಮೇಶ್ವರ್

ಬೆಂಗಳೂರು: ಮಂಗಳೂರಿನ ಹೊರವಲಯದಲ್ಲಿ ಹೊಸ ಕೇಂದ್ರ ಕಾರಾಗೃಹ ನಿರ್ಮಾಣವಾಗುತ್ತಿದ್ದು, ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಎರಡನೇ ಹಂತದ ಕಾಮಗಾರಿ ಕೈಗೊಂಡಿದ್ದು, ಆದಷ್ಟು ಬೇಗ ಪೂರ್ಣಗೊಳಿಸಿ, ಹಾಲಿ ಜೈಲನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ವಿಧಾನಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜಾ ಪ್ರಶ್ನೆಗೆ ಉತ್ತರಿಸಿದ ಅವರು, ಹಾಲಿ ಇರುವ ಜಿಲ್ಲಾ ಕಾರಾಗೃಹ ಹಳೆಯದಾಗಿದ್ದು, ಕಾಂಪೌಂಡ್ ಕುಸಿದಿದೆ. ಅಲ್ಲದೇ, ನಗರದ ಮಧ್ಯಭಾಗದಲ್ಲಿ ಇರುವುದರಿಂದ ಜೈಲಿನಲ್ಲಿ ಅಕ್ರಮ ಚಟುವಟಿಕೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ 2018ರಲ್ಲಿ ಬಂಟ್ವಾಳ ತಾಲೂಕಿನ ಚೇಳೂರು ಹಾಗೂ ಕುರ್ನಾಡು ಗ್ರಾಮದಲ್ಲಿ 63 ಎಕರೆ ಜಾಗ ಖರೀದಿಸಲಾಗಿತ್ತು ಎಂದರು.
ಕೇಂದ್ರ ಕಾರಾಗೃಹ ನಿರ್ಮಾಣಕ್ಕಾಗಿ ಮೊದಲ ಹಂತದಲ್ಲಿ 110 ಕೋಟಿ ರೂ. ಮಂಜೂರು ಮಾಡಿ, 2018ರಲ್ಲಿ ಕೈಗೊಂಡಿದ್ದ ಮೊದಲ ಹಂತದ ಕಾಮಗಾರಿ ಮುಗಿದಿದೆ. ಎರಡನೇ ಹಂತದ ಕಾಮಗಾರಿಗಳಿಗೆ 195 ಕೋಟಿ ರೂ. ಆಗಲಿದ್ದು, ಈ ಸಂಬಂಧ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಲಭ್ಯತೆ ಆಧರಿಸಿ, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಡಾ.ಜಿ.ಪರಮೇಶ್ವರ್ ವಿವರಿಸಿದರು.
ಜೈಲಿನಲ್ಲಿ ಮೊಬೈಲ್ ಬಳಕೆ ಹತ್ತಿಕ್ಕಲು ಹೈರೆಸ್ಯೂಲೇಷನ್ ಜಾಮರ್ ಅಳವಡಿಸಲಾಗುತ್ತಿದೆ. ಜೈಲಿನ ಸುತ್ತಮುತ್ತಲಿನ ನಿವಾಸಿಗಳಿಗೆ ನೆಟ್‍ವರ್ಕ್ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳ ಬಂದ ಹಿನ್ನೆಲೆಯಲ್ಲಿ ಜೈಲಿಗೆ ಮಾತ್ರ ಜಾಮರ್ ಸೀಮಿತ ಬಳಕೆ ರೀತಿ ಮಾಡಿಕೊಡಲು ತಾಂತ್ರಿಕ ತಂಡಕ್ಕೆ ಮನವಿ ಮಾಡಲಾಗಿದೆ. ಬಿಗಿ ತಪಾಸಣೆಗಾಗಿ ಜೈಲು ವಾರ್ಡನ್‍ಗಳ ಬದಲು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.