ನಾಳೆಯಿಂದ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಗಳು ಆರಂಭ : 8 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ನೋಂದಣಿ

ಸಾಂದರ್ಭಿಕ ಚಿತ್ರ
ಬೆಂಗಳೂರು : ರಾಜ್ಯಾದ್ಯಂತ ನಾಳೆಯಿಂದ (ಮಾ.21) ಎ.4ರ ವರೆಗೆ ಎಸೆಸೆಲ್ಸಿ ಪರೀಕ್ಷೆ-1 ನಡೆಯಲಿದ್ದು, ಈ ಬಾರಿ ಒಟ್ಟು 8,96,447 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ರಾಜ್ಯದ 2,818 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ.
ಈ ಬಾರಿ 8,42,917 ಹೊಸ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರೆ, 38,091 ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು 15,539 ಖಾಸಗಿ ಅಭ್ಯರ್ಥಿಗಳಾಗಿದ್ದಾರೆ. 4,61,563 ಬಾಲಕರು ಮತ್ತು 4,34,884 ಬಾಲಕಿಯರು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಒಟ್ಟು 15,881 ಪ್ರೌಢ ಶಾಲೆಗಳಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದಾರೆ.
ಪರೀಕ್ಷಾ ಅಕ್ರಮವನ್ನು ತಡೆಯಲು ಕಡ್ಡಾಯ ವೆಬ್‍ಕಾಸ್ಟಿಂಗ್ ಜೊತೆಗೆ 2,818 ಸ್ಥಾನಿಕ ಜಾಗೃತ ದಳ, ಜಿಲ್ಲಾ ಹಂತದಲ್ಲಿ 410 ಮತ್ತು ತಾಲೂಕು ಹಂತದಲ್ಲಿ 1,662 ವಿಚಕ್ಷಣ ಜಾಗೃತ ದಳಗಳು ಕಾರ್ಯ ನಿರ್ವಹಿಸುತ್ತಿವೆ. ಇನ್ನು 2,240 ಕೇಂದ್ರದಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ. 65 ಸಾವಿರ ಮೌಲ್ಯಮಾಪಕರು ಕಾರ್ಯನಿರ್ವಹಿಸಲಿದ್ದಾರೆ.
ಎಸೆಸೆಲ್ಸಿ ಪರೀಕ್ಷಾ ವೇಳಾಪಟ್ಟಿ: ಇಂದು(ಮಾ.21) ಪ್ರಥಮ ಭಾಷೆ ಕನ್ನಡ, ತೆಲಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ ಪರೀಕ್ಷೆಗಳು ನಡೆಯಲಿವೆ. ಮಾ.24ರಂದು ಗಣಿತ, ಸಮಾಜಶಾಸ್ತ್ರ, ಮಾ.26ರಂದು ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ ಹಾಗೂ ಮಾ.29ರಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ.
ಎ.1ರಂದು ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಮತ್ತು ಅರ್ಥಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಎ.2ರಂದು ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ ಪರೀಕ್ಷೆಗಳು ನಡೆಯಲಿವೆ.
ಎ.4ರಂದು ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಪರೀಕ್ಷೆಗಳು ಹಾಗೂ ಅದೇ ದಿನ ಎನ್‍ಎಸ್‍ಕ್ಯೂಎಫ್ ವಿಷಯಗಳಾದ ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್, ರೀಟೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್‍ನೆಸ್, ಅಪರೆಲ್ ಮೇಡ್ ಅಪ್ಸ್ ಅಂಡ್ ಹೋಮ್ ಫರ್ನಿಷಿಂಗ್, ಎಲೆಕ್ಟ್ರಾನಿಕ್ ಅಂಡ್ ಹಾರ್ಡ್‍ವೇರ್ ಪರೀಕ್ಷೆಗಳು ನಡೆಯಲಿವೆ.