ಸಚಿವರ ಗೈರು ಹಾಜರಿ; ಸರಕಾರದ ವಿರುದ್ಧ ಸ್ಪೀಕರ್ ಖಾದರ್ ಚಾಟಿ

ಬೆಂಗಳೂರು : ‘ಸದನಕ್ಕೆ ಸಚಿವರೇ ಗೈರು ಹಾಜರಾಗುವ ಮೂಲಕ ರಾಜ್ಯ ಸರಕಾರದ ಗೌರವವನ್ನು ಸಚಿವರೇ ಹಾಳು ಮಾಡುತ್ತಿದ್ದಾರೆ’ ಎಂದು ಸ್ಪೀಕರ್ ಯು.ಟಿ.ಖಾದರ್, ಸರಕಾರದ ವಿರುದ್ಧವೇ ಚಾಟಿ ಬೀಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಮಂಗಳವಾರ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಾನೂನು ಮತ್ತು ಸುವ್ಯವ¸ ವಿಷಯ ಪ್ರಸ್ತಾಪಿಸುವ ವೇಳೆ ಸದನದಲ್ಲಿ ಸಚಿವರ ಆಸನ ಖಾಲಿ ಖಾಲಿಯಾಗಿವೆ ಎಂದು ಆಕ್ಷೇಪಿಸಿದರು. ಆಗ ಕಂದಾಯ ಸಚಿವ ಕೃಷ್ಣಭೈರೇಗೌಡ, ‘ಸರಕಾರದ ಕಾರ್ಯ ಕಲಾಪಗಳು ನಡೆಯಲು ಅವಕಾಶ ಮಾಡಿಕೊಡಿ’ ಎಂದು ಸ್ಪೀಕರ್‌ಗೆ ಮನವಿ ಮಾಡಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಖಾದರ್, ‘ನೀವೊಬ್ಬರೇ ಸಚಿವರು ಸದನದಲ್ಲಿದ್ದೀರಿ. ಉಳಿದ ಮಂತ್ರಿಗಳು ಸದನದಲ್ಲಿರಬೇಕು. ಗೈರು ಹಾಜರಿಯಾಗುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸರಿಯಾದ ಸಮಯಕ್ಕೆ ಸದನಕ್ಕೆ ಬಾರದೇ ಸರಕಾರದ ಗೌರವವನ್ನು ತೆಗೆಯುತ್ತಿದ್ದಾರೆ’ ಎಂದು ಚಾಟಿ ಬೀಸಿದರು.
‘ಸದನಕ್ಕೆ ಸಕಾಲಕ್ಕೆ ಬಾರದಿದ್ದ ಮೇಲೆ ಏಕೆ ಮಂತ್ರಿಯಾಗಬೇಕು?. ಸರಕಾರದ ಪರವಾಗಿ ಶಾಸಕರ ಪ್ರಶ್ನೆಗಳಿಗೆ ಉತ್ತರ ನೀಡಲಾಗದಿದ್ದರೆ ಏಕೆ ಸಚಿವರಾಗಬೇಕು? ಎಂದು ಸ್ಪೀಕರ್ ಖಾದರ್ ಖಾರವಾಗಿ ಪ್ರಶ್ನಿಸಿದರು.
ವಿಪಕ್ಷಗಳ ಹೇಳಿಕೆ ತಪ್ಪೆಂದು ಹೇಳುತ್ತಿಲ್ಲ. ಸದನದಲ್ಲಿ ಸಚಿವರು ಇರಬೇಕೆಂದು ಅವರು ಕೇಳುವುದು ಸರಿ. ಮುಖ್ಯಮಂತ್ರಿ ಇದ್ದಾಗ ಎಲ್ಲ ಸಚಿವರೂ ಬರುತ್ತಾರೆ. ಅವರಿಲ್ಲದಿದ್ದಾಗಲೂ ಎಲ್ಲ ಸಚಿವರಿರಬೇಕು. ಮುಖ್ಯಮಂತ್ರಿ ಬೆಂಬಲಕ್ಕೆ ಸಚಿವರು ನಿಲ್ಲುವುದು ಬೇಕಾಗಿಲ್ಲ. ಅವರು ಸಮರ್ಥಿಸಿಕೊಳ್ಳುತ್ತಾರೆ ಎಂದು ಖಾದರ್ ಹೇಳಿದರು.