2 ‘ಬಿ’ಗೆ ಸರಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ; ವಿಧಾನಸಭೆಯಲ್ಲಿ ವಿಧೇಯಕ ಮಂಡನೆ

ಎಚ್.ಕೆ.ಪಾಟೀಲ್
ಬೆಂಗಳೂರು : ಸರಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ 2 ‘ಬಿ’ ಸೇರಿದವರಿಗೆ ಶೇ.4ರಷ್ಟು ಹಾಗೂ ಹಿಂದುಳಿದ ವರ್ಗಗಳಿಗೆ ಸರಕು ಮತ್ತು ಸೇವೆಗಳಲ್ಲಿ ಮೀಸಲಾತಿ ಕಲ್ಪಿಸುವ ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ(ತಿದ್ದುಪಡಿ)ವಿಧೇಯಕ-2025 ಅನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು.
ಮಂಗಳವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು, ಬಜೆಟ್‍ನಲ್ಲಿ ಘೋಷಿಸಿರುವಂತೆ ಹಿಂದುಳಿದ ವರ್ಗಗಳಿಗೆ ಹಾಗೂ ಅಲ್ಪಸಂಖ್ಯಾತರಿಗೆ ‘ಸಾರ್ವಜನಿಕ ಸರಕು ಹಾಗೂ ಸರಕಾರಿ ಕಾಮಗಾರಿಗಳ ಗುತ್ತಿಗೆಗಳಲ್ಲಿ ಮೀಸಲಾತಿ ನೀಡುವ ವಿಧೇಯಕವನ್ನು ಮಂಡಿಸಿದರು.
2025-26ನೆ ಸಾಲಿನ ಆಯವ್ಯಯದ ಭಾಷಣದಲ್ಲಿ ಪ್ರಸ್ತಾವಿಸಲಾದ ಭರವಸೆಯಂತೆ ನಿರುದ್ಯೋಗ ಸಮಸ್ಯೆ ನಿವಾರಿಸಲು ಈ ವಿಧೇಯಕ ರೂಪಿಸಲಾಗಿದೆ. ಸರಕಾರಿ ಕಾಮಗಾರಿಗಳ ಪೈಕಿ ಎರಡು ಕೋಟಿ ರೂ.ಮೊತ್ತದ ವರೆಗೆ ಶೇ.4ರಷ್ಟನ್ನು ಮೀರದಂತೆ ಹಿಂದುಳಿದವರ ಪ್ರವರ್ಗ 2 ‘ಬಿ’ಗೆ ಸೇರಿದ ವ್ಯಕ್ತಿಗಳಿಗೆ ಪಾಲ್ಗೊಳ್ಳಲು ಪ್ರೋತ್ಸಾಹಿಸುವ ಉದ್ದೇಶವನ್ನು ವಿಧೇಯಕ ಹೊಂದಿದೆ ಎಂದು ಉಲ್ಲೇಖಿಸಲಾಗಿದೆ.
ಸರಕಾರದ ವಿವಿಧ ನಿರ್ಮಾಣ ಕಾಮಗಾರಿಗಳನ್ನು ಗುತ್ತಿಗೆ ನೀಡುವಾಗ ಶೇ.4ರಷ್ಟು ಮೀಸಲಾತಿಯನ್ನು ಪ್ರವರ್ಗ 2ಬಿ ಸಮುದಾಯದವರಿಗೆ ಕಲ್ಪಿಸುವ ವಿಧೇಯಕ ಇದಾಗಿದ್ದು, ಸುಮಾರು 2ಕೋಟಿ ರೂ. ವರೆಗಿನ ಕಾಮಗಾರಿಗಳಲ್ಲಿ ಪ್ರವರ್ಗ 2 ‘ಬಿ’ ಸಮುದಾಯದವರಿಗೆ ವಿಧೇಯಕ ಮೀಸಲಾತಿ ಕಲ್ಪಿಸುತ್ತದೆ. ಜತೆಗೆ, ಜಿಎಸ್‍ಟಿ ಸಂಬಂಧಿಸಿದ 1 ಕೋಟಿ ರೂ.ವರೆಗಿನ ಕಾಮಗಾರಿಗಳಲ್ಲಿ ಈ ವರ್ಗದವರಿಗೆ ಅವಕಾಶ ದೊರೆಯಲಿದೆ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.
ಇನ್ನೂ, ಅಧಿಸೂಚನಾ ಇಲಾಖೆಗಳಲ್ಲಿ ನಿರ್ಮಾಣ ಕಾಮಗಾರಿಗಳ ಹೊರತಾಗಿ ಸರಕು ಮತ್ತು ಸೇವೆಗಳ ಸಂಗ್ರಹಣೆಯಲ್ಲಿ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಬುಡಕಟ್ಟುಗಳು ಹಾಗೂ ಹಿಂದುಳಿದ ವರ್ಗಗಳಲ್ಲಿ ಶೇ.1 ಕೋಟಿ ರೂ.ವರೆಗೂ ಸರಕು ಸೇವೆಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿಗಳಿಗೆ ಶೇ.17.15 ರಷ್ಟು, ಪರಿಶಿಷ್ಟ ಪಂಗಡಗಳಿಗೆ ಶೇ.6.95 ರಷ್ಟು, ಪ್ರವರ್ಗ 2ಎ ಗೆ ಶೇ.15 ರಷ್ಟು, ಪ್ರವರ್ಗ 2ಬಿಗೆ ಶೇ.4 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.
ಸರಕಾರಿ ನಿರ್ಮಾಣ ಕಾಮಗಾರಿಗಳಲ್ಲಿ 1 ಕೋಟಿ ರೂ.ಗಳ ಮೀಸಲಾತಿಯನ್ನು 2 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಇದರಲ್ಲಿ ಈವರೆಗೂ ಎಸ್ಸಿ,ಎಸ್ಟಿಗಳಿಗೆ ಮಾತ್ರ ಮೀಸಲಾತಿ ಇದ್ದು ಪ್ರವರ್ಗ 2 ಬಿಗೂ ಅವಕಾಶ ಕಲ್ಪಿಸಲಾಗಿದೆ. ನಿರ್ದಿಷ್ಟ ಸಮುದಾಯದ ವ್ಯಕ್ತಿಗಳಿಂದ ಟೆಂಡರ್ ಸ್ವೀಕರಿಸದಿದ್ದಲ್ಲಿ ಅಂತಹ ಸರಕು ಮತ್ತು ಸೇವೆಗಳ ಸಂಗ್ರಹಣೆಯ ಆಹ್ವಾನಗಳಿಗೆ ಪ್ರತಿಕ್ರಿಯಿಸಿದ ಇತರ ಟೆಂಡರ್ ದಾರರಿಗೆ ಅವಕಾಶ ನೀಡಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.