ಕರ್ನಾಟಕ ಕರಾವಳಿಯ ಮೂರನೇ ಒಂದು ಪ್ರದೇಶ ಕಡಲ್ಕೊರೆತಕ್ಕೆ ತುತ್ತಾಗುತ್ತಿದೆ: ವರದಿ
ಬೆಂಗಳೂರು: ರಾಜ್ಯ ಸರಕಾರದ ಇತ್ತೀಚಿನ ಅಧ್ಯಯನದ ಪ್ರಕಾರ ಲಕ್ಷಾಂತರ ಜನರು ವಾಸವಾಗಿರುವ ರಾಜ್ಯದ ಕರಾವಳಿಯಲ್ಲಿ ಕಡಲು ಕೊರೆತಕ್ಕೆ ತುತ್ತಾಗುತ್ತಿರುವ ಪ್ರದೇಶಗಳು ಹೆಚ್ಚುತ್ತಿದ್ದು,1990 ಮತ್ತು 2024ರ ನಡುವೆ ಕಡಲ್ಕೊರೆತದ ವ್ಯಾಪ್ತಿ 43.7 ಕಿ.ಮೀ.ನಿಂದ 91.6 ಕಿ.ಮೀ.ಗೆ ಹೆಚ್ಚಳಗೊಂಡಿದ್ದು, ನಷ್ಟ ಮತ್ತು ಹಾನಿಗೆ ಒಡ್ಡಿಕೊಂಡಿವೆ.
ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯದ ಅಧೀನದಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಸಸ್ಟೈನೇಬಲ್ ಕೋಸ್ಟಲ್ ಮ್ಯಾನೇಜ್‌ಮೆಂಟ್ ಕಳೆದ ವಾರ ಪರಿಸರ ಇಲಾಖೆಗೆ ಸಲ್ಲಿಸಿರುವ ತನ್ನ ವರದಿಯಲ್ಲಿ ಕರ್ನಾಟಕದ 328.55 ಕಿ.ಮೀ.ಉದ್ದದ ಕರಾವಳಿಯ ಶೇ.28ರಷ್ಟು ಭಾಗವು ಹೆಚ್ಚಿನ ಕಡಲು ಕೊರೆತಕ್ಕೆ ಒಡ್ಡಿಕೊಂಡಿದೆ ಎಂದು ಹೇಳಿದೆ.
‘ಕರ್ನಾಟಕ ಕರಾವಳಿಯಲ್ಲಿ ಕಡಲತೀರ ನಿರ್ವಹಣಾ ಯೋಜನೆ ’ಶೀರ್ಷಿಕೆಯ ವರದಿಯು, ಹವಾಮಾನ ಬದಲಾವಣೆ ಮತ್ತು ಹೆಚ್ಚುತ್ತಿರುವ ಮಾನವ ಚಟುವಟಿಕೆಗಳಿಂದಾಗಿ ಉಂಟಾಗಿರುವ ಬೆದರಿಕೆಯ ಹಿನ್ನೆಲೆಯಲ್ಲಿ ಪ್ರಕೃತಿ ಆಧಾರಿತ ಪರಿಹಾರ ಕ್ರಮಗಳನ್ನು ಅಳವಡಿಸಿಕೊಳ್ಳುವ ಅಗತ್ಯಕ್ಕೆ ಒತ್ತು ನೀಡಿದೆ.
ಹೆಚ್ಚಿನ ರೆಸೊಲ್ಯೂಷನ್‌ನ ಪ್ರಾದೇಶಿಕ ವಿಶ್ಲೇಷಣೆಯ ಆಧಾರದಲ್ಲಿ ವರದಿಯು,1990ರಿಂದ ಕರಾವಳಿ ಮೂಲಸೌಕರ್ಯಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದೆ, ಹೆಚ್ಚಿನ ಪ್ರಮಾಣದಲ್ಲಿ ಹೂಳು ಸಂಗ್ರಹ ಮತ್ತು ತೀರಗಳಲ್ಲಿಯ ಚಟುವಟಿಕೆಗಳು ಕೊರೆತಕ್ಕೆ ತುತ್ತಾಗುವ ಪ್ರದೇಶಗಳ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ಹೇಳಿದೆ.
ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಒಟ್ಟು 328.55 ಕಿ.ಮೀ.ಉದ್ದದ ಕರಾವಳಿಯನ್ನು ಹೊಂದಿವೆ. ಉತ್ತರ ಕನ್ನಡದ 193 ಕಿ.ಮೀ.ಉದ್ದದ ಕರಾವಳಿ ರೇಖೆಯಲ್ಲಿ ಹೆಚ್ಚಿನ ಪ್ರದೇಶಗಳು ಗುಡ್ಡಗಾಡು ಮತ್ತು ಸಮತಟ್ಟಾದ ಎತ್ತರದ ವಲಯಗಳಾಗಿದ್ದು,ಕಡಲ ಕೊರೆತದ ಪ್ರಮಾಣ ಶೇ.28ರಷ್ಟಿದೆ.
ವಾಸ್ತವದಲ್ಲಿ ಉತ್ತರ ಕನ್ನಡ ಜಿಲ್ಲೆಯು ಬಂಡೆಗಲ್ಲುಗಳಿಂದ ಕೂಡಿದ ವಿಸ್ತಾರವಾದ ತೀರಗಳನ್ನು ಹೊಂದಿದ್ದರೂ ರಾಜ್ಯದ ಕಡಲ್ಕೊರೆತದಲ್ಲಿ ಶೇ.39ರಷ್ಟು ಪಾಲನ್ನು ಹೊಂದಿದೆ. ಒಮ್ಮೆ ನಾಮಮಾತ್ರ ಕಡಲ ಕೊರೆತವನ್ನು ಹೊಂದಿದ್ದ ಪ್ರದೇಶಗಳು ಹೆಚ್ಚಿದ ಕರಾವಳಿ ಮೂಲಸೌಕರ್ಯ ಚಟುವಟಿಕೆಗಳಿಂದಾಗಿ ಗಮನಾರ್ಹ ಪ್ರಮಾಣದಲ್ಲಿ ಕೊರೆತಕ್ಕೆ ಸಾಕ್ಷಿಯಾಗುತ್ತಿವೆ ಎಂದು ವರದಿಯು ಹೇಳಿದೆ.
ಉಡುಪಿ ಜಿಲ್ಲೆಯಲ್ಲಿ ಶೇ.43ರಷ್ಟು ಸಮುದ್ರ ತೀರವು ತಡೆಗೋಡೆಗಳಿಂದ ರಕ್ಷಿಸಲ್ಪಟ್ಟಿದ್ದರೂ,ಶೇ.38ರಷ್ಟು ಕರಾವಳಿ ಪ್ರದೇಶದಲ್ಲಿ ಕಡಲ ಕೊರೆತ ಮಂದುವರಿದಿದೆ ಮತ್ತು ರಾಜ್ಯದ ಒಟ್ಟು ಕಡಲ ಕೊರೆತದಲ್ಲಿ ಶೇ.32ರಷ್ಟು ಪಾಲನ್ನು ಹೊಂದಿದೆ.
ಕಡಲ ಕೊರೆತವು ಕರಾವಳಿಯಲ್ಲಿ ಜನವಸತಿ ಪ್ರದೇಶಗಳು,ಕುರುಚಲು ಪ್ರದೇಶಗಳು,ನದಿಮುಖದ ಪರಿಸರಗಳು,ಮ್ಯಾಂಗ್ರೋವ್‌ಗಳು ಇತ್ಯಾದಿಗಳ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಎನ್ನುವುದನ್ನು ವರದಿಯು ಗಮನಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯು ಕೇವಲ 37 ಕಿ.ಮೀ. ಕರಾವಳಿಯನ್ನು ಹೊಂದಿದ್ದರೂ ಉಚ್ಚಿಲ ಮತ್ತು ಬಟಪಾಡಿ ತೀರಗಳು ಸೇರಿದಂತೆ ಕಡಲ ಕೊರೆತವು ತೀವ್ರವಾಗಿದ್ದು,ಕಡಲ ಕೊರೆತಕ್ಕೆ ಒಡ್ಡಿಕೊಂಡಿರುವ ಪ್ರದೇಶಗಳ ಪ್ರಮಾಣ ಶೇ.39ರಷ್ಟಿದೆ.
ವಿವಿಧ ಕರಾವಳಿ ವಲಯಗಳಲ್ಲಿ ಹರಡಿಕೊಂಡಿರುವ ಮೂರು ಜಿಲ್ಲೆಗಳಲ್ಲಿ 44 ನಿರ್ಣಾಯಕ ಕಡಲ ಕೊರೆತ ಪ್ರದೇಶಗಳನ್ನು ವರದಿಯು ಗುರುತಿಸಿದೆ.
ಈ ಪ್ರದೇಗಳಲ್ಲಿ ನಷ್ಟ ಮತ್ತು ಹಾನಿಯನ್ನು ತಡೆಯಲು ಕ್ರಮಗಳು ಅಗತ್ಯವಾಗಿವೆ ಎಂದು ಹೇಳಿರುವ ವರದಿಯು,ಕೊರೆತವನ್ನು ನಿಧಾನಗೊಳಿಸುವ ನಿಟ್ಟಿನಲ್ಲಿ ಕಡಲತೀರದ ಅಗಲವನ್ನು ಕಾಯ್ದುಕೊಳ್ಳಲು ಮರಳು ಮರುಪೂರಣ, ಮರಳು ದಿಬ್ಬಗಳು ಮತ್ತು ಜೈವಿಕ ಕವಚಗಳ ಪುನರ್ವಸತಿಗೆ ಶಿಫಾರಸು ಮಾಡಿದೆ.
ಕೃಪೆ: deccanherald.com