ಬಾಲಕಿಯರಿಗೆ 18 ವರ್ಷ ತುಂಬುವ ಮುನ್ನವೇ ಮದುವೆ ಮಾಡುವ ಪರಿಪಾಠಕ್ಕೆ ಪೋಷಕರೇ ಕಾರಣ: ಹೈಕೋರ್ಟ್‌

Update: 2024-11-28 03:33 GMT

ಬೆಂಗಳೂರು: ಬಾಲಕಿಯರಿಗೆ 18 ವರ್ಷ ತುಂಬುವ ಮುನ್ನವೇ  ಮದುವೆ ಮಾಡುವ ಪರಿಪಾಠಕ್ಕೆ ಪೋಷಕರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿರುವ ಹೈಕೋರ್ಟ್‌, ‘ಇಂತಹ ಪ್ರಕರಣಗಳಲ್ಲಿ ಪೋಷಕರ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಲೇಬಾರದು. ಆಗಷ್ಟೇ, ಈ ಅನಿಷ್ಟ ಪದ್ಧತಿಯ ಆಚರಣೆ ಸ್ಥಗಿತಗೊಳ್ಳುತ್ತದೆ’ ಎಂದು ವಾಗ್ದಾಳಿ ನಡೆಸಿ ನಡೆಸಿದೆ  .

ಬಾಲಕಿಯನ್ನು ಮದುವೆಯಾದ ಕಾರಣಕ್ಕೆ ಆಕೆಯ ಪತಿ ಹಾಗೂ ಪೋಷಕರ ವಿರುದ್ಧ, ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಹಾಗೂ ಬಾಲ್ಯ ವಿವಾಹ ತಡೆ ಕಾಯ್ದೆ-2006ರ ವಿವಿಧ ಕಲಂಗಳಡಿ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣವೊಂದನ್ನು ರದ್ದುಪಡಿಸುವಂತೆ ಕೋರಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

‘ಈ ಪ್ರಕರಣದಲ್ಲಿ ಪೋಷಕರನ್ನು ಆರೋಪ ಮುಕ್ತಗೊಳಿಸಬೇಕು’ ಎಂಬ ಅರ್ಜಿದಾರರ ಪರ ವಕೀಲರ ಮನವಿಯನ್ನು ತಳ್ಳಿ ಹಾಕಿದ ನ್ಯಾಯಪೀಠ, ‘ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವ ಮುನ್ನವೇ ಮದುವೆಯಾಗುವಂತೆ ಏಕೆ ಬಲವಂತ ಮಾಡಬೇಕು. ಪೋಷಕರ ಈ ನಡೆಯನ್ನು ಸಮರ್ಥಿಸಲು ಸಾಧ್ಯವೇ ಇಲ್ಲ. ಇಂತಹ ಪೋಷಕರ ವಿರುದ್ಧ ದಂಡನಾ ಕ್ರಮಗಳನ್ನು ಜರುಗಿಸಲು ಇದು ಸಕಾಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.

‘ಮತ್ತೊಂದು ಪ್ರಕರಣದಲ್ಲಿ ಬಾಲಕಿಯೊಬ್ಬಳು ತನಗೆ 18 ವರ್ಷ ತುಂಬಿಲ್ಲ. ಮದುವೆ ಮಾಡಬೇಡಿ ಎಂದು ಕೇಳಿಕೊಂಡರೂ ಪೋಷಕರು ಮದುವೆ ಮಾಡಿದ್ದಾರೆ. ಇದರಿಂದ ಮಕ್ಕಳು ಪೋಕ್ಸೊ ಪ್ರಕರಣ ಎದುರಿಸುವಂತಾಗಿದೆ. ಇಂತಹ ಪ್ರಕರಣಗಳಿಗೆ ಪೋಷಕರೇ ಜವಾಬ್ದಾರಿ. ಹಾಗಾಗಿ, ಪೋಷಕರನ್ನು ಇಂತಹ ವಿಷಯಗಳಲ್ಲಿ ಸಂವೇದನಶೀಲರನ್ನಾಗಿ ಮಾಡಬೇಕಿದೆ’ ಎಂದು ನ್ಯಾಯಪೀಠ ಹೇಳಿತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News