ಕರಾವಳಿಯ ‘ಕಡಲತೀರದ ಪ್ರವಾಸಿ ತಾಣಗಳ’ ಅಭಿವೃದ್ಧಿಗೆ ಕ್ರಮ : ಸಚಿವ ಎಚ್.ಕೆ.ಪಾಟೀಲ್

Update: 2024-07-23 12:59 GMT

ಬೆಂಗಳೂರು: ‘ಕೇರಳದ ಕಾಸರಗೋಡಿನಿಂದ ಕಾರವಾರದ ವರೆಗಿನ 320 ಕಿ.ಮೀ.ಯಲ್ಲಿ ಕರಾವಳಿಯ ನೂರು ಕಿಲೋ ಮೀಟರ್ ಪ್ರದೇಶದ ಕಡಲ ತೀರದಲ್ಲಿನ 40 ಪ್ರವಾಸಿ ತಾಣಗಳನ್ನು ಗುರುತಿಸಿದ್ದು, ಅವುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಡಾ.ಭರತ್ ಶೆಟ್ಟಿ ವೈ. ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಮಂಗಳೂರು, ಉಡುಪಿ, ಉತ್ತರ ಕನ್ನಡ ಹಾಗೂ ಮುಂಬೈ ನಾಲ್ಕು ಕಡೆಗಳಲ್ಲಿ ಈ ಪ್ರದೇಶಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾರ್ಯಾಗಾರಗಳನ್ನು ನಡೆಸಲಾಗುವುದು. ಆ ಸಂದರ್ಭದಲ್ಲಿ ಸ್ಥಳೀಯ ಶಾಸಕರನ್ನು ಆಹ್ವಾನಿಸಲು ಸೂಚಿಸಲಾಗುವುದು ಎಂದರು.

ಈಗಾಗಲೇ ಪ್ರವಾಸೋದ್ಯಮ ಇಲಾಖೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರಿನ 17, ಬೆಳ್ತಂಗಡಿ-7, ಸುಳ್ಯ-3, ಪುತ್ತೂರು- 6, ಮೂಡಬಿದರೆ-2, ಬಂಟ್ವಾಳ ಹಾಗೂ ಮೂಲ್ಕಿ ತಲಾ ಒಂದೊಂದು ತಾಣ ಸೇರಿ ಒಟ್ಟು 37 ಸ್ಥಳಗಳನ್ನು ಗುರುತಿಸಲಾಗಿದೆ. ಇಲಾಖೆಯಿಂದ ಮೂಲಸೌಲಭ್ಯ ಕಲ್ಪಿಸಲು 44 ಕಾಮಗಾರಿಗಳಿಗೆ ಒಟ್ಟು 2,415 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News