ಬೊಕ್ಕಸಕ್ಕೆ ಹೊರೆಯಾಗುವ ಮಧ್ಯಸ್ಥಿಕೆ ಕಲಂ ಕೈಬಿಡಲು ತೀರ್ಮಾನ : ಸಚಿವ ಎಚ್.ಕೆ.ಪಾಟೀಲ್

Update: 2024-11-19 16:12 GMT

ಎಚ್.ಕೆ.ಪಾಟೀಲ್

ಬೆಂಗಳೂರು: ‘ರಾಜ್ಯ ಸರಕಾರದ ಬೊಕ್ಕಸಕ್ಕೆ ಆರ್ಥಿಕವಾಗಿ ಹೊರೆಯಾಗುವ ಹಿನ್ನೆಲೆಯಲ್ಲಿ ಗುತ್ತಿಗೆ ಮತ್ತು ಟೆಂಡರ್‌ ಗಳಲ್ಲಿ ಮಧ್ಯಸ್ಥಿಕೆ ಕಲಂ ಅನ್ನು ಕೈಬಿಡಲು ತೀರ್ಮಾನಿಸಲಾಗಿದೆ’ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಧ್ಯಸ್ಥಿಕೆ ಕಲಂನಿಂದ ಸರಕಾರಕ್ಕೆ ಆರ್ಥಿಕ ಹೊರೆ ಹೆಚ್ಚುವುದು ಕಾನೂನು ಇಲಾಖೆಯ ಗಮನಕ್ಕೆ ಬಂದಿದ್ದು, ಈ ಕಲಂ ಅನ್ನು ರದ್ದುಪಡಿಸಲು ಸುತ್ತೋಲೆ ಹೊರಡಿಸಲಾಗಿದೆ ಎಂದರು.

ಮಧ್ಯಸ್ಥಿಕೆ ಕಲಂ ರದ್ದು ಪಡಿಸಿರುವುದರಿಂದ ಗುತ್ತಿಗೆದಾರರು ಮತ್ತು ಟೆಂಡರ್ ಪಡೆದವರು ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಹಲವು ಪ್ರಕರಣಗಳಲ್ಲಿ ಈ ಕಲಂ ಅನ್ನು ಬಳಸಿಕೊಂಡು ನ್ಯಾಯಾಲಯಗಳ ಮೆಟ್ಟಿಲು ಏರಿದ ಕಾರಣ ರಾಜ್ಯ ಸರಕಾರ ಆರ್ಥಿಕವಾಗಿ ನಷ್ಟ ಅನುಭವಿಸಿತ್ತು. ಪ್ರಮುಖ ಎನಿಸುವ ಒಂದೆರಡು ಪ್ರಕರಣಗಳಲ್ಲಿ ಮಧ್ಯಸ್ಥಿಕೆಯ ಅಗತ್ಯವಿದೆ ಎಂದು ಕಂಡುಬಂದರೆ ಕಾನೂನು ಇಲಾಖೆ ಅದನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಮಧ್ಯಸ್ಥಿಕೆ ಕಲಂನಿಂದ ಖಾಸಗಿ ವ್ಯಕ್ತಿಗಳೊಂದಿಗೆ ಸರಕಾರ ಇತ್ಯರ್ಥಮಾಡಿಕೊಳ್ಳುವ ವ್ಯವಸ್ಥೆ ಸರಿಯಲ್ಲ. ಇಂತಹ ನೂರಾರು ಪ್ರಕರಣಗಳು ಮುಂದಿನ ದಿನಗಳಲ್ಲಿ ಬರುವ ಸಾಧ್ಯತೆ ಇರುವುದರಿಂದ, ಮುಂದುವರೆಸುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬರಲಾಯಿತು. ಇದು ವ್ಯವಸ್ಥೆಯ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಮಧ್ಯಸ್ಥಿಕೆ ಪ್ರಕರಣವೊಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಆಗಿ, ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಲು ನಿರ್ಧರಿಸಲಾಯಿತು ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ರಾಜ್ಯದಲ್ಲಿ ಒಟ್ಟು 1,006 ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣಗಳು ಬಾಕಿ ಉಳಿದಿದ್ದು, ಮುಂದಿನ ಮಾರ್ಚ್ 31ರೊಳಗೆ ಇದನ್ನು ಗಣನೀಯವಾಗಿ ತಗ್ಗಿಸಲು ತೀರ್ಮಾನಿಸಲಾಗಿದೆ. ನ್ಯಾಯಾಲಯಗಳ ಆದೇಶ ಮತ್ತು ಸೂಚನೆಗಳನ್ನು ಅಧಿಕಾರಿಗಳು ಪಾಲಿಸದ ಕಾರಣ ಹಿಂದೆ 2,500ಕ್ಕೂ ಹೆಚ್ಚು ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣಗಳಿದ್ದವು. ಈಗ ಆ ಸಂಖ್ಯೆ 1,006ಕ್ಕೆ ಇಳಿದಿದೆ ಎಂದು ಎಚ್.ಕೆ.ಪಾಟೀಲ್ ವಿವರಿಸಿದರು.

ಹಿಂದಿನ 10 ವರ್ಷಗಳಲ್ಲಿ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ಏರಿಕೆ ಆಗುತ್ತಿರುವುದು ಆರೋಗ್ಯಕರ ಲಕ್ಷಣವಲ್ಲ. ನ್ಯಾಯಾಲಯಗಳು ಕೊಟ್ಟ ಆದೇಶ ಮತ್ತು ಸೂಚನೆಗಳ ಬಗ್ಗೆ ಗೌರವ ಕಡಿಮೆ ಆಗುತ್ತಿದೆ ಎಂಬುದರ ಸೂಚಕ ಇದಾಗಿದ್ದು, ಅಧಿಕಾರಿಗಳು ಕಟ್ಟುನಿಟ್ಟಾಗಿ ನ್ಯಾಯಾಲಯದ ಆದೇಶಗಳನ್ನು ಪಾಲಿಸಬೇಕು ಮತ್ತು ಸ್ಪಂದನಶೀಲರಾಗಬೇಕು ಎಂದು ಎಚ್.ಕೆ.ಪಾಟೀಲ್ ಸೂಚಿಸಿದರು.

‘ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಕರೆಯುವ ಸಂಬಂಧ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅವರಿಗೆ ಕಡತ ರವಾನಿಸಿದ್ದು, ರಾಜ್ಯಪಾಲರು ಬೆಳಗಾವಿಯಲ್ಲಿ ಅಧಿವೇಶನ ಕರೆಯಲು ಸಮ್ಮತಿ ಸೂಚಿಸಿದ್ದಾರೆ. ಡಿಸೆಂಬರ್ 9ರಿಂದ 20ರ ವರೆಗೆ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಜರುಗಲಿದೆ’

-ಎಚ್.ಕೆ.ಪಾಟೀಲ್, ಕಾನೂನು ಮತ್ತು ಸಂಸದೀಯ ಸಚಿವ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News