ವಿಧಾನಸಭೆಯಿಂದ ಮುನಿರತ್ನರನ್ನು ಅಮಾನತುಗೊಳಿಸಲು ಸ್ಪೀಕರ್‌ಗೆ ಸಚಿವ ಎಚ್.ಕೆ.ಪಾಟೀಲ್ ಪತ್ರ
ಬೆಂಗಳೂರು : ಶಾಸಕ ಮುನಿರತ್ನ ಲಂಚದ ವ್ಯವಹಾರದಲ್ಲಿ ಹಣ ತಂದು ಕೊಡದ ಗುತ್ತಿಗೆದಾರರೊಬ್ಬರಿಗೆ ಮಾತನಾಡಿದ್ದಾರೆ ಎನ್ನಲಾದ ಸಂಭಾಷಣೆ ಬಹಿರಂಗಗೊಂಡಿದೆ. ಬಳಸಬಾರದ ಭಾಷೆ, ಆಡಬಾರದ ಮಾತುಗಳನ್ನು ಆಡಿ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿರುವ ಅವರನ್ನು ವಿಧಾನಸಭೆಯಿಂದ ಅಮಾನತುಗೊಳಿಸಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ.
ಸೋಮವಾರ ಈ ಸಂಬಂಧ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಪತ್ರ ಬರೆದಿರುವ ಎಚ್.ಕೆ.ಪಾಟೀಲ್, ಸಭಾಧ್ಯಕ್ಷರಿಗೆ ಪ್ರದತ್ತವಾಗಿರುವ ಪರಮಾಧಿಕಾರವನ್ನು ಚಲಾಯಿಸಿ ವಿಶೇಷ ಅಪರೂಪದ ಕ್ರಮ ಕೈಗೊಳ್ಳುವ ಮೂಲಕ ಮುನಿರತ್ನ ಅವರನ್ನು ವಿಧಾನಸಭೆಯಿಂದ ಅಮಾನತುಗೊಳಿಸಬೇಕು ಮತ್ತು ನೀತಿ ನಿರೂಪಣಾ ಸಮಿತಿ ರಚನೆ ಮಾಡಿ, ಆ ಸಮಿತಿಯ ಮೂಲಕ ಅಸಭ್ಯವಾಗಿ ವರ್ತಿಸುವ ಸದಸ್ಯರ ವಿರುದ್ಧ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ಈ ಘಟನೆ ಖಂಡನೀಯ, ಅದೂ ಗುತ್ತಿಗೆದಾರರೊಬ್ಬರನ್ನು ಲಂಚ ತಂದುಕೊಡಲಿಲ್ಲವೆಂಬ ಕಾರಣಕ್ಕೆ ನಿಂದಿಸುವುದು ಅನಾಹುತಕಾರಿ. ಶಾಸಕರೊಬ್ಬರು ಇಂಥ ಕೀಳು ಮಟ್ಟಕ್ಕೆ ಇಳಿದಿರುವುದರಿಂದ ಶಾಸನ ಸಭೆ ಘನತೆಗೆ ದೊಡ್ಡ ಕೊಡಲಿ ಪೆಟ್ಟು ಬಿದ್ದಿದೆ. ನಮ್ಮ ರಾಜ್ಯದಲ್ಲಿ ಶಾಸಕರ ಹಕ್ಕು ಬಾಧ್ಯತೆಗಳ ದುರುಪಯೋಗದ ಘಟನೆ ಇದೇ ಮೊದಲಲ್ಲ. ಶಾಸಕರೊಬ್ಬರು ಶಾಸಕರ ಭವನದಲ್ಲಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಕೈಗೆ ಸಿಕ್ಕಿ ಬಿದ್ದಿದ್ದ ಘಟನೆ ಜನಮಾನಸದಿಂದ ಇನ್ನೂ ಮಾಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೆಜಿಎಫ್ ಶಾಸಕರಾಗಿದ್ದ ಸಂಪಂಗಿ ಪ್ರಕರಣ ರಾಜ್ಯದ ಶಾಸಕಾಂಗ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿದೆ. ಅಂದು ಅಧಿಕಾರದಲ್ಲಿದ್ದ ರಾಜಕೀಯ ಪಕ್ಷದ ಶಾಸಕರು ಲಂಚ ಸ್ವೀಕರಿಸಿದ ಸ್ಥಳ ಶಾಸಕರ ಭವನ, ವಿಧಾನ ಮಂಡಲದ ಆವರಣದ ಭಾಗ ಎಂದು ಘೋಷಿಸಿ ನಿಯಮಗಳಿಗೆ ತಿದ್ದುಪಡಿ ಮಾಡಲು ಕಾರಣವಾಗಿತ್ತು ಎಂದು ಎಚ್.ಕೆ.ಪಾಟೀಲ್ ಸ್ಮರಿಸಿದ್ದಾರೆ.
ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ 17 ಸಂಸದರನ್ನು ಪ್ರಶ್ನೆಗಾಗಿ ಲಂಚ ಪ್ರಕರಣದಲ್ಲಿ ಸಂಸತ್ತಿನ ಸದಸ್ಯತ್ವದಿಂದ ಅನರ್ಹಗೊಳಿಸಿದ ಸೋಮನಾಥ ಚಟರ್ಜಿ ಅವರು ಲೋಕಸಭಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಂಸತ್ತು ಹಾಕಿದ ಮೇಲ್ಪಂಕ್ತಿ ಇಂತಹ ಘಟನೆ ನಡೆದಾಗ ಕರ್ನಾಟಕಕ್ಕೆ ಮಾರ್ಗದರ್ಶಕವಾಗಬೇಕಾಗಿದೆ. ಇಂದಿನ ಪಕರಣದಲ್ಲಿ ಮುನಿರತ್ನ ಅತ್ಯಂತ ಹೇಯವಾದ, ಅಸಭ್ಯವಾದ ಭಾಷೆ ಬಳಸಿ ಕೀಳು ಅಭಿರುಚಿ ಪ್ರದರ್ಶಿಸಿದ ಘಟನೆ ಕ್ಷಮಾರ್ಹವಲ್ಲ ಎಂದು ಅವರು ಹೇಳಿದ್ದಾರೆ.
ವಿಧಾನಸಭೆಯ ಸದಸ್ಯರಿಗೆ ನೈತಿಕ ಮೌಲ್ಯಗಳ ನಿಯಂತ್ರಣ ಹೇರುವ ‘ನೀತಿ-ನಿರೂಪಣಾ ಸಮಿತಿ’ ಎಂದೆಂದಿಗಿಂತಲೂ ಇಂದು ರಚಿಸಬೇಕಾದ ಅತಿ ಅವಶ್ಯಕತೆ ಇದೆ. ಸದನದ ಒಳಗೆ ಹಾಗೂ ಹೊರಗೆ ಅಸಭ್ಯವಾಗಿ ವರ್ತಿಸುವ ಸದಸ್ಯರ ವರ್ತನೆಯನ್ನು ಮೌಲ್ಯಗಳನ್ನು ಗಾಳಿಗೆ ತೂರುವ ನಡತೆಗಳನ್ನು ನಿಯಂತ್ರಿಸುವ ನಿಯಮಗಳನ್ನು ತಕ್ಷಣ ರಚಿಸಬೇಕು ಎಂದು ಅವರು ತಿಒತ್ತಾಯಿಸಿದ್ದಾರೆ.
ಯಾವುದೇ ಅಸಭ್ಯ ಹಾಗೂ ಅಸಂಸದೀಯ ವರ್ತನೆಗೆ ಗಂಭೀರವಾದ ಮತ್ತು ಕಠಿಣ ಕ್ರಮಗಳ ಕುರಿತು ನಿಯಂತ್ರಣ ಮತ್ತು ಕಡಿವಾಣ ಹಾಕಲೇಬೇಕು. ಇಂತಹ ಅಸಭ್ಯ ವರ್ತನೆಗಳಿಗೆ ಶೂನ್ಯ ಸಹನೆ ಇಡೀ ವಿಧಾನ ಮಂಡಲ ಹೊಂದಬೇಕಾದ ಸಂದರ್ಭ ಹಾಗೂ ಜನಾಪೇಕ್ಷೆ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಈ ಘಟನೆಯಿಂದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮೌಲ್ಯಗಳಿಗೆ, ಸತ್ಸಂಪ್ರದಾಯಗಳಿಗೆ ತೀವ್ರವಾದ ಕೊಡಲಿ ಪೆಟ್ಟು ಬಿದ್ದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಶಾನಸಭೆಯ ಘನತೆ, ಗೌರವಕ್ಕೆ ತೀವ್ರವಾದ ಧಕ್ಕೆಯುಂಟಾಗಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನೈತಿಕ ಅಧಃಪತನವನ್ನು ನಿಯಂತ್ರಿಸಲು ತೀವ್ರವಾಗಿ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.