ಖಾಸಗಿ ಪಿಯು ಕಾಲೇಜು ಉಪನ್ಯಾಸಕರಿಗೆ ʼಆರೋಗ್ಯ ಸಂಜೀವಿನಿʼ ಸೌಲಭ್ಯಕ್ಕೆ ಚಿಂತನೆ : ಸಚಿವ ಮಧು ಬಂಗಾರಪ್ಪ
Update: 2024-07-22 13:51 GMT
ಬೆಂಗಳೂರು : ರಾಜ್ಯದಲ್ಲಿ ಅನುದಾನರಹಿತ(ಖಾಸಗಿ) ಪದವಿ ಪೂರ್ವ(ಪಿಯು) ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ಆರೋಗ್ಯ ಸಂಜೀವಿನಿ ಸೌಲಭ್ಯ ನೀಡಲು ಚಿಂತನೆ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಫ್ರೌಡ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸೋಮವಾರ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‍ನ ಸದಸ್ಯ ಭೋಜೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಉಪನ್ಯಾಸಕರಿಗೆ ಆರೋಗ್ಯ ಸಂಜೀವಿನಿ ಅಥವಾ ಆರೋಗ್ಯ ಕಾರ್ಡ್ ಸೌಲಭ್ಯ ನೀಡಲು ಸರಕಾರಕ್ಕೆ ಆರ್ಥಿಕ ಹೊರೆ ಎಷ್ಟಾಗುತ್ತದೆ ಎಂದು ಪರಿಶೀಲಿಸಿ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.
ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಗೆ ಸಂಬಳ ಕಡಿಮೆ ಇದೆ. ಆದುದರಿಂದ ಅನಾರೋಗ್ಯದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆಯಲು ಉಪನ್ಯಾಸಕರಿಗೆ ಕಷ್ಟವಾಗುತ್ತಿದೆ. ಇದು ಸರಕಾರದ ಗಮನಕ್ಕೂ ಬಂದಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.