ಎಸ್ಸಿಎಪಿ/ಟಿಎಸ್‍ಪಿ ಯೋಜನೆ ಹಣ ಪರಿಶಿಷ್ಟ ಸಮುದಾಯಗಳಿಗೆ ತಲುಪುತ್ತಿದೆ : ಸಚಿವ ಮಹದೇವಪ್ಪ

Update: 2024-07-19 16:31 GMT

ಬೆಂಗಳೂರು : ಪರಿಶಿಷ್ಟ ಸಮುದಾಯಗಳಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡರೂ, ಅದೇ ಸಮುದಾಯದವರ ಫಲಾನುಭವಿಗಳಿಗೆ ಸಿಗುವುದರಿಂದ ಇದರಲ್ಲಿ ದುರುಪಯೋಗ ಆಗಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ವಿಧಾನ ಪರಿಷತ್‍ನಲ್ಲಿ ಕಾಂಗ್ರೆಸ್ ಸದಸ್ಯ ಸುಧಾಮದಾಸ್ ‘ಗ್ಯಾರಂಟಿ ಯೋಜನೆಗಳಿಗೆ ಎಸ್ಸಿಎಸ್‍ಪಿ/ ಟಿಎಸ್‍ಪಿ ಯೋಜನೆಯಡಿ ಮೀಸಲಿಟ್ಟ ಅನುದಾನವನ್ನು ಬಳಸಿಕೊಳ್ಳಲಾಗುತ್ತದೆಯೇ ಎಂದು ಪ್ರಶ್ನಿಸಿದಾಗ ಅವರು ಉತ್ತರಿಸಿದರು.

ದೇಶದಲ್ಲೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ಎಸ್ಸಿಎಪಿ/ಟಿಎಸ್‍ಪಿ ಯೋಜನೆಯನ್ನು ನಮ್ಮ ಸರಕಾರ ಜಾರಿ ಮಾಡಿದೆ. ಇದನ್ನು ಹೊರತುಪಡಿಸಿದರೆ ಆಂಧ್ರ ಮತ್ತು ತೆಲಂಗಾಣದಲ್ಲಿ ಈ ಯೋಜನೆ ಇದೆ. ಪರಿಶಿಷ್ಟ ಸಮುದಾಯಕ್ಕೆ ಸೇರಿದವರಿಗೆ ಈ ಹಣ ತಲುಪುತ್ತದೆ. ಹೀಗಾಗಿ ದುರುಪಯೋಗವಾಗುವ ಪ್ರಶ್ನೆ ಉದ್ದವಿಸುವುದಿಲ್ಲ ಎಂದು ಹೇಳಿದರು.

ಸೆಕ್ಷನ್ ಎ, ಬಿ, ಸಿ ಅಡಿ ಮೀಸಲಿಟ್ಟ ಅನುದಾನವನ್ನು ವಿವಿಧ ಯೋಜನೆಗಳಿಗೆ ಬಳಸಿಕೊಳ್ಳಲು ಅವಕಾಶವಿತ್ತು. ಹಿಂದಿನ ಬಿಜೆಪಿ ಸರಕಾರ 8 ಸಾವಿರ ಕೋಟಿ ಹಣವನ್ನು ಅನ್ಯ ಯೋಜನೆಗಳಿಗೆ ಬಳಸಿಕೊಂಡಿರುವ ನಿಧರ್ಶನಗಳಿವೆ. ಹೀಗಾಗಿ ಅನ್ಯ ಕಾರ್ಯಗಳಿಗೆ ಅನುದಾನ ಬಳಸಿಕೊಳ್ಳಲು ಇದ್ದ ಸೆಕ್ಷನ್ ಡಿ ಕಾಯ್ದೆಯನ್ನು ತೆಗೆದು ಹಾಕಲಾಗಿದೆ ಎಂದು ವಿವರಿಸಿದರು.

ಸಚಿವರ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಎಸ್ಸಿಎಪಿ/ಟಿಎಸ್‍ಪಿ ಯೋಜನೆಯ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ. ಕಾಯ್ದೆಯ ಸೆಕ್ಷನ್ 7ಡಿ ಯನ್ನು ಸರಕಾರ ತೆಗೆದು ಹಾಕಿಲ್ಲ. ಪರಿಶಿಷ್ಟ ಜಾತಿಗಳಿಗೆ ಮೀಸಲಿಟ್ಟ ಹಣ ಬೇರೆ  ಇಲಾಖೆಯ ಗ್ಯಾರಂಟಿ ಯೋಜನೆಗಳಿಗೆ ಹೇಗೆ ಬಳಸುತ್ತಿದ್ದೀರಾ? ಉಚಿತ ಬಸ್‍ನಲ್ಲಿ ಪ್ರಯಾಣಿಸುವವರಿಗೆ ಜಾತಿ ನೋಡಿ ಟಿಕೆಟ್ 5 ಕೊಡುತ್ತೀರಾ? ಅನ್ನಭಾಗ್ಯ ಯೋಜನೆ ಅಡಿ ಜಾತಿ ನೋಡಿ ಅಕ್ಕಿ ಕೊಡಿತ್ತೀರಾ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಡಾ.ಮಹದೇವಪ್ಪ, ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲಿ ಎಸ್ಸಿಎಪಿ/ಟಿಎಸ್‍ಪಿ ಯೋಜನೆಯನ್ನು ತರಲಾಯಿತು. ಇದರ ಅಡಿ ಹಣವನ್ನು ಯಾವ ರೀತಿ ಬಳಕೆ ಮಾಡಬೇಕು ಅಂತ ಸೆವೆನ್ ಎ, ಸೆವೆನ್ ಬಿ, ಸೆವನ್ ಸಿ, ಸೆವೆನ್ ಡಿ ಅಂತ ಮಾಡಲಾಗಿದೆ. ಸೆವೆನ್ ಡಿ ಸೆಕ್ಷನ್ ಅನ್ನು ನಿನ್ನೆಯ ಕ್ಯಾಬಿನೆಟ್‍ನಲ್ಲಿ ತೆಗೆದು ಹಾಕಿದ್ದೇವೆ. ಅನ್ಯ ಉದ್ದೇಶಗಳಿಗೆ ಯೋಜನೆ ಹಣ ಬಳಸಲು ಸಾಧ್ಯವಿಲ್ಲ. ಅದೇ ಸಮುದಾಯಕ್ಕೆ ಹಣ ಬಳಕೆ ಆಗಲಿದೆ ಎಂದರು.

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಹಣವನ್ನು ನಾವು ಬೇರೆ ಯೋಜನೆಗಳಿಗೆ ಬಳಸಿಕೊಂಡಿಲ್ಲ. ಕಾಯ್ದೆಯಲ್ಲಿ ಯಾವೆಲ್ಲ ನಿಯಮಗಳಿವೆಯೋ ಅದೇ ರೀತಿ ನಮ್ಮ ಸರಕಾರ ನಡೆದುಕೊಂಡಿದೆ. ಹೀಗಾಗಿ ಕಾಯ್ದೆ ಉಲ್ಲಂಘನೆಯಾಗುವ ಪ್ರಶ್ನೆ ಬರುವುದೇ ಇಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News