ಟೋಕಿಯೊದಲ್ಲಿ ಹಿಟಾಚಿ, ನಿಸಿನ್‌ ಫುಡ್ಸ್‌, ನಿಸಾನ್‌ ಮೋಟರ್‌ ಮುಖ್ಯಸ್ಥರನ್ನು ಭೇಟಿ ಮಾಡಿದ ಸಚಿವ ಎಂ.ಬಿ.ಪಾಟೀಲ್

Update: 2024-06-24 16:57 GMT

ಟೋಕಿಯೊ (ಜಪಾನ್) : ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಸೋಮವಾರ  ಬಹುರಾಷ್ಟ್ರೀಯ ಕಂಪನಿಗಳಾದ ಹಿಟಾಚಿ, ನಿಸಿನ್‌ಫುಡ್ಸ್‌ ಮತ್ತು ನಿಸಾನ್‌ ಮೋಟರ್‌  ಕಂಪನಿಗಳ ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಸಿದರು.

ರಾಜ್ಯದ ಉನ್ನತ ಮಟ್ಟದ ನಿಯೋಗದ 5 ದಿನಗಳ ಜಪಾನ್‌ ಭೇಟಿಯ ಮೊದಲ ದಿನ ನಡೆದ ಸಭೆಗಳಲ್ಲಿ ಬಂಡವಾಳ ಹೂಡಿಕೆಯ ಸಾಧ್ಯತೆಗಳು ಮತ್ತು ರಾಜ್ಯ ಸರಕಾರದ ಜೊತೆಗಿನ ಸಹಯೋಗ ವೃದ್ಧಿಸುವುದಕ್ಕೆ ಗಮನ ಕೇಂದ್ರೀಕರಿಸಲಾಗಿತ್ತು. ಹಿಟಾಚಿ ಕಂಪನಿ ಜೊತೆಗಿನ ಸಭೆಯಲ್ಲಿ, ಭವಿಷ್ಯದ ತಂತ್ರಜ್ಞಾನ, ಪರಿಸರ ಸ್ನೇಹಿ ಸುಸ್ಥಿರ ಇಂಧನ,  ನಿರ್ವಹಣೆಯ ಮುನ್ಸೂಚನೆ, ಸೈಬರ್‌ ಸುರಕ್ಷತೆ ಪಾಲುದಾರಿಕೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು, ನಿರ್ದಿಷ್ಟವಾಗಿ ಹಣಕಾಸು ಸೇವೆಗಳಲ್ಲಿ ವಹಿವಾಟು ವಿಸ್ತರಿಸಲು ಹಿಟಾಚಿ ಕಂಪನಿಯು ಆಸಕ್ತಿ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಉದ್ಯಮ ವಿಸ್ತರಣೆ ಸಾಧ್ಯತೆಗಳ ಬಗ್ಗೆ ನಿಸಿನ್‌ ಫುಡ್ಸ್‌ ಕಂಪನಿ ಜೊತೆಗೆ ನಿಯೋಗವು ಮಾತುಕತೆ ನಡೆಸಿತು.  ʼಬೆಂಗಳೂರು ನಗರ ಕೇಂದ್ರವಾಗಿರಿಸಿ ವಹಿವಾಟು ವಿಸ್ತರಿಸಲು ವಿಪುಲ ಅವಕಾಶಗಳಿವೆ. ವಿಜಯಪುರ, ಧಾರವಾಡ ಜಿಲ್ಲೆಗಳಲ್ಲಿ ಸ್ಥಾಪಿಸಲಿರುವ ಆಹಾರ ಪಾರ್ಕ್‌ಗಳಲ್ಲಿ ಬಂಡವಾಳ ಹೂಡಿಕೆಗೆ ಅಗತ್ಯ ಬೆಂಬಲ ನೀಡಲಾಗುವುದುʼ ಎಂದು ಸಚಿವರು  ಭರವಸೆ ನೀಡಿದರು.

ಕರ್ನಾಟಕದಲ್ಲಿ ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆ ಉಪಕ್ರಮಕ್ಕೆ ಸಂಬಂಧಿಸಿದಂತೆ ಪಾಲುದಾರಿಕೆ ಮತ್ತು ವಿಸ್ತರಣೆ ಕುರಿತು ಸಚಿವರು ನಿಸಾನ್‌ ಮೋಟರ್‌ನ ಹಿರಿಯ ಉಪಾಧ್ಯಕ್ಷ  ಜೋಜಿ ತಗಾವಾ ಅವರ ಜೊತೆ ಮಾತುಕತೆ ನಡೆಸಿದರು, ನಿಸಾನ್‌ ಇಂಡಿಯಾದ ಅಧ್ಯಕ್ಷ ಫ್ರ್ಯಾಂಕ್‌ ಟೊರೆಸ್‌ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್ ಸೆಲ್ವಕುಮಾರ್, ವಾಣಿಜ್ಯ, ಕೈಗಾರಿಕೆ ಇಲಾಖೆಯ ಆಯುಕ್ತರಾದ  ಗುಂಜನ್ ಕೃಷ್ಣ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News