ಕುಡಿಯುವ ನೀರು ಕಲುಷಿತಗೊಳ್ಳದಂತೆ ಮುಂಜಾಗ್ರತಾ ಕ್ರಮ ಅಗತ್ಯ : ಸಚಿವ ಪ್ರಿಯಾಂಕ್ ಖರ್ಗೆ

Update: 2024-06-19 14:00 GMT

ಬೆಂಗಳೂರು : ಈ ಬಾರಿ ಉತ್ತಮ ಮುಂಗಾರು ಮಳೆಯಾಗುವ ನಿರೀಕ್ಷೆಯಿದ್ದು, ಮುಂಜಾಗರೂಕತೆವಹಿಸದಿದ್ದಲ್ಲಿ ಕುಡಿಯುವ ನೀರು ಕಲುಷಿತಗೊಳ್ಳುವ ಪ್ರಕರಣಗಳು ಹೆಚ್ಚುವ ಸಾಧ್ಯತೆ ಇದೆ. ಆದುದರಿಂದ, ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಂಜಿನಿಯರುಗಳು ಅತ್ಯಂತ ಜಾಗರೂಕತೆಯಿಂದ ಕಾರ್ಯನಿರ್ವಹಿಸಿ, ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆವಹಿಸಬೇಕೆಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದರು.

ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮೊದಲ ಬಾರಿಗೆ ಕರೆದಿದ್ದ ಗ್ರಾಮೀಣಾಭಿವೃದ್ಧಿ ಇಲಾಖೆಯ ರಾಜ್ಯದ ಎಲ್ಲ ಎಂಜಿನಿಯರುಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು, ಜೂನಿಯರ್ ಎಂಜನಿಯರುಗಳು, ವಾಟರ್ ಮನ್‍ಗಳು ಹಾಗೂ ಇನ್ನಿತರರಿಗೆ ನೀರಿನ ಗುಣಮಟ್ಟ ಪರೀಕ್ಷೆ ಕುರಿತಂತೆ ತರಬೇತಿ ನೀಡಲು ತಕ್ಷಣದ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗ್ರಾಮೀಣ ನೀರು ಸರಬರಾಜು ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಮಟ್ಟದಲ್ಲಿ ವಾರಕ್ಕೆ ಒಂದು ದಿನ ಪ್ರವಾಸ ಮಾಡಿ ನೀರು ಸರಬರಾಜು ವ್ಯವಸ್ಥೆಯ ಬಗ್ಗೆ ಪರಿಶೀಲನೆ ಮಾಡಿ ಆಯುಕ್ತರಿಗೆ ವರದಿ ಸಲ್ಲಿಸಬೇಕು. ಪ್ರತಿ ತಿಂಗಳು 2ನೆಯ ತಾರೀಕು ತಾವು ನಡೆಸುವ ರಾಜ್ಯ ಮಟ್ಟದ ವಿಡಿಯೋ ಸಭೆಯಲ್ಲಿ ಈ ವರದಿಗಳನ್ನು ಪರಿಶೀಲಿಸುವುದಾಗಿ ಅವರು ಹೇಳಿದರು.

ಕೊಳವೆಬಾವಿಗಳ ಸುತ್ತಮುತ್ತಲೂ ಪರಿಸರವನ್ನು ಶುಚಿಯಾಗಿರಿಸಿಕೊಳ್ಳುವುದು, ತ್ಯಾಜ್ಯನೀರು ಕಾಲುವೆಗಳಲ್ಲಿ ಹಾದು ಹೋಗದಂತೆ ಎಚ್ಚರವಹಿಸಬೇಕು. ನೀರು ಸರಬರಾಜು ಕೊಳವೆಗಳ ಕೊನೆಗಳಲ್ಲಿ ಬಿಗಿಯಾಗಿ ಎಂಡ್‍ಕ್ಯಾಪ್ ಅಳವಡಿಸುವುದು, ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳ ಮೂಲಕ ನೀರು ಕಲುಷಿತಗೊಳ್ಳುವುದನ್ನು ತಡೆಯಬಹುದೆಂದು ಪ್ರಿಯಾಂಕ್ ಖರ್ಗೆ ಕಿವಿಮಾತು ಹೇಳಿದರು.

ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ: ಜಲಜೀವನ ಮಿಷನ್ ಹಾಗೂ ಬಹುಗ್ರಾಮ ಯೋಜನೆ ಕಾರ್ಯಕ್ರಮಗಳಡಿ ಕೈಗೆತ್ತಿಕೊಂಡಿರುವ ಕೆಲವು ಯೋಜನೆಗಳು ಪೂರ್ಣಗೊಳ್ಳುವಲ್ಲಿ ವಿಳಂಬವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಪ್ರಿಯಾಂಕ್ ಖರ್ಗೆ, ಬೇರೆ ಎಲ್ಲ ಯೋಜನೆಗಳಿಗೆ ಹೋಲಿಸಿದಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು ಮುಖ್ಯವಾದುದು ಎಂದರು.

ಯೋಜನೆ ವಿಳಂಬ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಪ್ರಗತಿಯಲ್ಲಿರುವ ಜಿಲ್ಲಾವಾರು ಕಾಮಗಾರಿಗಳ ವಿಮರ್ಶೆ ಮಾಡಿ ಹಲವಾರು ಸೂಚನೆ, ಸಲಹೆಗಳನ್ನು ನೀಡಿದರು. ಸಭೆಗೆ ಗೈರುಹಾಜರಾದ ಎರಡು ಜಿಲ್ಲೆಗಳ ಎಂಜನಿಯರುಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಪ್ರಿಯಾಂಕ್ ಖರ್ಗೆ ಸೂಚಿಸಿದರು.

ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಅಂಜುಮ್ ಪರ್ವೇಝ್, ಗ್ರಾಮೀಣ ನೀರು ಸರಬರಾಜು ಇಲಾಖೆಯ ಆಯುಕ್ತ ಕೆ.ನಾಗೇಂದ್ರ ಪ್ರಸಾದ್, ಮುಖ್ಯ ಅಭಿಯಂತರ ಇಜಾಝ್ ಹುಸೇನ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News