ಗ್ರಾಮೀಣ ರಸ್ತೆಗಳಿಗೂ ‘ಪ್ರಗತಿಪಥ’ ಅನುದಾನ ಬಳಕೆ : ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಕೇಂದ್ರ ಸರಕಾರ ಮತ್ತೆ ಆರಂಭಿಸಿರುವ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಹಾಗೂ ರಾಜ್ಯ ಸರಕಾರದ ಪ್ರಗತಿಪಥ ಅನುದಾನವನ್ನು ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ ಬಳಸಿಕೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯರಾದ ಬಿ.ಶಿವಣ್ಣ ಹಾಗೂ ರಾಘವೇಂದ್ರ ಬಸವರಾಜ ಹಿಟ್ನಾಳ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಳೆಯಿಂದ ಗ್ರಾಮೀಣ ಭಾಗದಲ್ಲಿ ರಸ್ತೆಗಳು ಹಾನಿಗೊಳಗಾಗಿವೆ. ಇವುಗಳನ್ನು ದುರಸ್ತಿ ಪಡಿಸಲು ಮುಖ್ಯಮಂತ್ರಿ ಅವರ ಬಳಿ ಚರ್ಚಿಸಿ ವಿಶೇಷ ಅನುದಾನ ಪಡೆದುಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.
ಅದೇ ರೀತಿ, ಟಾಸ್ಕ್ ಫೋರ್ಸ್‌ಗೆ ಈಗಾಗಲೇ ನೀಡಲಾಗಿರುವ ಅನುದಾನ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆರ್ಥಿಕ ಲಭ್ಯತೆ ಜೊತೆಗೆ ವಿಶೇಷ ಅನುದಾನವನ್ನು ಒದಗಿಸಲಾಗುವುದು ಎಂದ ಅವರು, ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು ಸ್ಥಗಿತಗೊಳಿಸಿತ್ತು.
ನಿನ್ನೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‌ನಲ್ಲಿ ಗ್ರಾಮ ಸಡಕ್ ಯೋಜನೆಯನ್ನು ಮರು ಆರಂಭಿಸಲಾಗಿದೆ. ಎರಡು ವಾರಗಳ ಹಿಂದೆ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಪ್ರಗತಿಪಥ ರಸ್ತೆಗೆ ಅನುಮೋದನೆ ನೀಡಿದೆ. ಈ ಎಲ್ಲ ಅನುದಾನಗಳನ್ನು ಬಳಸಿಕೊಂಡು ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆ ಮಾಡಲಾಗುವುದು ಎಂದು ಅವರು ಉಲ್ಲೇಖಿಸಿದರು.
ಕಲ್ಯಾಣ ಕರ್ನಾಟಕ ಭಾಗದ ರಸ್ತೆಗಳ ಸುಧಾರಣೆಗಾಗಿ ಕಲ್ಯಾಣಪಥ ಯೋಜನೆ ಜಾರಿಗೊಳಿಸಲಾಗಿದೆ. ಇದರ ಮಾರ್ಗಸೂಚಿಗಳನ್ನು ಕಾರ್ಯ ನಿರ್ವಾಹಕ ಅಭಿಯಂತರರಿಗೆ ರವಾನಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಪ್ರಸ್ತಾವಿತ ಯೋಜನೆಗಳಿಗೆ ಮಂಜೂರಾತಿ ನೀಡಿದ್ದು ಅದನ್ನು ಯೋಜನಾ ಇಲಾಖೆಗೆ ಕಳುಹಿಸಿ ಅನುಮೋದನೆ ಪಡೆದ ಬಳಿಕ ರಸ್ತೆ ಸುಧಾರಣೆಗೆ ಅನುದಾನ ಒದಗಿಸುವುದಾಗಿ ಅವರು ಹೇಳಿದರು.