ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ ಕಾಮಗಾರಿ ತ್ವರಿತ ಅನುಷ್ಠಾನಕ್ಕೆ ಸಚಿವ ಝಮೀರ್ ಅಹ್ಮದ್ ಸೂಚನೆ
ಬೆಂಗಳೂರು: ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ ಸಂಬಂಧ ರೂಪಿಸಿರುವ ಕ್ರಿಯಾ ಯೋಜನೆ ತ್ವರಿತ ಗತಿಯಲ್ಲಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲು ವಸತಿ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಝಮೀರ್ ಅಹ್ಮದ್ ಖಾನ್ ಸೂಚನೆ ನೀಡಿದ್ದಾರೆ.
ಸೋಮವಾರ ಕೊಳೆಗೇರಿ ಅಭಿವೃದ್ಧಿ ಮಂಡಳಿ ಸಭಾಂಗಣದಲ್ಲಿ ಗಣಿ ಪರಿಸರ ಪುನರ್ ನಿರ್ಮಾಣ ನಿಗಮದ ಅಧಿಕಾರಿಗಳ ಸಭೆ ನಡೆಸಿ, ಈಗಾಗಲೇ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ತಯಾರಿಸಿರುವ 1193 ಕೋಟಿ ರೂ.ಕ್ರಿಯಾ ಯೋಜನೆ ಹಾಗೂ ಅದರ ಮುಂದಿನ ಪ್ರಕ್ರಿಯೆ ಕುರಿತು ಮಾಹಿತಿ ಪಡೆದು ಕಾಮಗಾರಿಗಳಿಗೆ ವೇಗ ನೀಡುವಂತೆ ತಿಳಿಸಿದರು.
ವಿಜಯನಗರ, ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆ ಗಳ ಗಣಿ ಬಾಧಿತ ಪ್ರದೇಶಗಳ ಪುನರ್ ನಿರ್ಮಾಣ ಯೋಜನೆಗಳ ಅನುಷ್ಠಾನದ ನೋಡಲ್ ಏಜೆನ್ಸಿ ವಸತಿ ಇಲಾಖೆ ವ್ಯಾಪ್ತಿಯ ರಾಜೀವ್ ಗಾಂಧಿ ವಸತಿ ನಿಗಮ ಆಗಿರುವುದರಿಂದ ನಮ್ಮ ಕಡೆಯಿಂದ ಯಾವುದೇ ವಿಳಂಬ ಆಗದಂತೆ ನೋಡಿಕೊಳ್ಳಬೇಕು ಎಂದು ಝಮೀರ್ ಅವರು ನಿರ್ದೇಶನ ನೀಡಿದರು.
ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಲಭ್ಯ ಇರುವ ನಿಧಿ, ಜಿಲ್ಲಾ ಮಟ್ಟದ ಡಿಎಂಎಫ್ ನಿಧಿ ಕುರಿತು ಮಾಹಿತಿ ಪಡೆದ ಸಚಿವರು, ನಾಲ್ಕು ಜಿಲ್ಲೆಗಳಲ್ಲಿ ಅಕ್ಟೋಬರ್ 10 ಹಾಗೂ 11, 16 ಹಾಗೂ 17 ರಂದು ಪ್ರವಾಸ ಮಾಡುವುದಾಗಿ ಅವರು ತಿಳಿಸಿದರು.
ವಸತಿ ಹೊರತುಪಡಿಸಿ ಮೂಲ ಸೌಕರ್ಯ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗೆ ಎಷ್ಟು ಕ್ರಿಯಾ ಯೋಜನೆ ರೂಪಿಸಲಾಗಿದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಬೇಡಿಕೆ ಏನಿದೆ ಎಂಬುದರ ಮಾಹಿತಿ ಜಿಲ್ಲಾವಾರು ನೀಡುವಂತೆ ಸಚಿವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಗಳಿಂದ ತ್ವರಿತ ವಾಗಿ ಪ್ರಸ್ತಾವನೆ ತರಿಸಿಕೊಳ್ಳಬೇಕು ಎಂದು ತಿಳಿಸಿದರು. ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ ನಿಧಿ 2018 ರವರೆಗೆ 23 ಸಾವಿರ ಕೋಟಿ ರೂ. ಸಂಗ್ರಹ ಆಗಿದ್ದು ಆ ನಂತರ 2023 ರವರೆಗೆ ಎಷ್ಟು ಸಂಗ್ರಹ ಆಗಿದೆ ಎಂಬುದರ ಬಗ್ಗೆಯೂ ಮಾಹಿತಿ ಪಡೆದರು.
ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕರಾದ ಸುಶೀಲಮ್ಮ ಉಪಸ್ಥಿತರಿದ್ದರು.