ಸಚಿವ ಸ್ಥಾನ ಬೇಕು ಎನ್ನುವ ಶಾಸಕರು ರಾಜೀನಾಮೆ ನೀಡಿ ಮನೆಗೆ ಹೋಗಲಿ: ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್
ಕೋಲಾರ: ‘ನನಗೆ ಸಚಿವ, ನಿಗಮ ಮಂಡಳಿ ಸ್ಥಾನ ಬೇಡವೇ ಬೇಡ. ಸಚಿವ ಸ್ಥಾನ ಬೇಕು ಎನ್ನುವ ಶಾಸಕರು ರಾಜೀನಾಮೆ ನೀಡಿ ಮನೆಗೆ ಹೋಗಲಿʼ ಎಂದು ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಕಾಂಗ್ರೆಸ್‌ನಲ್ಲಿ 135 ಶಾಸಕರು ಇದ್ದೇವೆ. ಸರ್ಕಾರ ಬೀಳಿಸಲು ಸಾಧ್ಯವಿಲ್ಲʼʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಕಡೆಯಿಂದ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಆಮಿಷ ಒಡ್ಡಲಾಗುತ್ತಿದೆ ಎಂಬ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಶಾಸಕ ರವಿ ಗಣಿಗ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ʼʼ ರವಿ ಗಣಿಗ ಅವರಿಗೆ ಯಾರಾದರೂ ಹಣ ನೀಡಲು ಮುಂದೆ ಬಂದಿದ್ದಾರೋ ಏನೋ ನನಗೆ ಗೊತ್ತಿಲ್ಲ. ಅವರ ಹೇಳಿಕೆಯನ್ನು ನಾನೂ ಗಮನಿಸಿದ್ದೇನೆʼʼ ಎಂದು ಹೇಳೀದರು.
ʼʼಜನ ಗೆಲ್ಲಿಸಿರುವುದು ಕ್ಷೇತ್ರದ ಕೆಲಸ ಮಾಡಲು. ಈಗಾಗಲೇ ಶಾಸಕರಿಗೆ ಅಭಿವೃದ್ಧಿ ಕೆಲಸಗಳಿಗೆಂದು ಲೋಕೋಪಯೋಗಿ ಇಲಾಖೆಯಿಂದ ತಲಾ 20 ಕೋಟಿ ಅನುದಾನ ಬಂದಿದೆ. ಇನ್ನೂ ಅನುದಾನ ಸಿಗಲಿದೆʼʼ ಎಂದು ತಿಳಿಸಿದರು.