ನಾಳೆ(ಜೂ.27) ಧಾರವಾಡ-ಬೆಂಗಳೂರು ವಂದೇ ಭಾರತ ರೈಲಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ
ಬೆಂಗಳೂರು, ಜೂ.26: ಹುಬ್ಬಳ್ಳಿ ಧಾರವಾಡದ ಜನತೆಗೆ ವಂದೇ ಭಾರತ್ ರೈಲು ಪ್ರಯಾಣಕ್ಕೆ ಕ್ಷಣಗಣನೆ. ದೇಶದ ಹೆಮ್ಮೆಯ ವಂದೇ ಭಾರತ್ ರೈಲು ಈಗಾಗಲೆ ಪ್ರಮುಖ ರಾಜ್ಯಗಳಲ್ಲಿ ಸಂಚರಿಸುತ್ತಿದ್ದು, ಈ ವಿಶೇಷ ರೈಲಿನಲ್ಲಿ ಪ್ರಯಾಣಿಸುವ ಸೌಭಾಗ್ಯ ಇದೀಗ ನಮಗೂ ದೊರಕುವಂತಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ(ಜೂ.27) ಏಕಕಾಲಕ್ಕೆ ದೇಶಾದ್ಯಂತ ಐದು ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದು, ಇದರಲ್ಲಿ ನಮ್ಮ ಧಾರವಾಡ-ಬೆಂಗಳೂರು ನಡುವಿನ ವಂದೇ ಭಾರತ್ ರೈಲಿಗೂ ಚಾಲನೆ ಸಿಗಲಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಎರಡನೆ ವಂದೇ ಭಾರತ್ ರೈಲು ಇದಾಗಿದ್ದು, ನಮ್ಮ ಭಾಗಕ್ಕೆ ಒದಗಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ರಾಜ್ಯದ ಜನತೆಯ ಪರವಾಗಿ ವಿಶೇಷವಾದ ಧನ್ಯವಾದಗಳು. ವಂದೇ ಭಾರತ್ ರೈಲು ನಮ್ಮ ದೇಶದ ಹೆಮ್ಮೆಯ ರೈಲಾಗಿದ್ದು, ದೇಶದ ಆಸ್ತಿ ನಮ್ಮ ಆಸ್ತಿ ಎಂಬಂತೆ ಗೌರವಿಸಿ ಪ್ರಯಾಣದ ಸಮಯದಲ್ಲಿ ಶುಚಿತ್ವಕ್ಕೂ ಮಹತ್ವ ನೀಡೋಣ ಎಂದು ಅವರು ತಿಳಿಸಿದ್ದಾರೆ.