ಪರಿಷತ್ ಚುನಾವಣೆಗೆ ಮದ್ಯ ಮಾರಾಟ ನಿರ್ಬಂಧದಲ್ಲಿ ಮಾರ್ಪಾಡು: ಮತದಾನ, ಎಣಿಕೆ ದಿನ ಮಾತ್ರ ನಿರ್ಬಂಧ
ಬೆಂಗಳೂರು: ಫೆ.16 ರಂದು ವಿಧಾನಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಸಂಬಂಧ ಮದ್ಯ ಮಾರಾಟ ನಿರ್ಬಂಧವನ್ನು ಹೈಕೋರ್ಟ್ ಮಾರ್ಪಾಡು ಮಾಡಿದೆ. ಮತದಾನದ ದಿನ ಮತ್ತು ಎಣಿಕೆ ದಿನದಂದು ಮಾತ್ರ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಿ ಮಧ್ಯಂತರ ಆದೇಶ ನೀಡಿದೆ.
ಫೆ.16 ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿರ್ಬಂಧಿಸಿರುವ ಹೈಕೋರ್ಟ್, ಮತ ಎಣಿಕೆ ದಿನ ಫೆ. 20 ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಮಾತ್ರ ಮದ್ಯ ಮಾರಾಟ ನಿರ್ಬಂಧಿಸಿ ನ್ಯಾ. ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಹೈಕೋರ್ಟ್ ಪೀಠ ಮಧ್ಯಂತರ ಆದೇಶ ನೀಡಿದೆ.
ಹಿನ್ನೆಲೆ
ರಾಜ್ಯದಲ್ಲಿ 2024ರ ವಿಧಾನ ಪರಿಷತ್ ಚುನಾವಣೆ ಇದೇ ಫೆ.16 ರಂದು ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಗೂ ಒಂದು ದಿನ ಮುನ್ನ ಸೇರಿ ಒಟ್ಟು 48 ಗಂಟೆಗಳ ಕಾಲ ಬೆಂಗಳೂರು ನಗರದಲ್ಲಿ ಮದ್ಯ ಮಾರಾಟಕ್ಕೆ ನಿಷೇಧಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿಯವರು ಆದೇಶಿದ್ದರು.
ಡಿಸಿ ಕ್ರಮ ಪ್ರಶ್ನಿಸಿ ಬೃಹತ್ ಬೆಂಗಳೂರು ಹೋಟೆಲ್ ಸಂಘಟನೆಯ ಕಾರ್ಯದರ್ಶಿ ವೀರೇಂದ್ರ ಎನ್.ಕಾಮತ್ ಸೇರಿದಂತೆ ಒಟ್ಟು ನಾಲ್ವರು ಅರ್ಜಿ ಸಲ್ಲಿಸಿದ್ದರು. ಈಗ ನ್ಯಾ.ಎಸ್.ಆರ್.ಕೃಷ್ಣ ಕುಮಾರ್ ಅವರಿದ್ದ ಪೀಠ, ಆಹಾರ ಪೂರೈಸಲು ರೆಸ್ಟೋರೆಂಟ್ ಗಳಿಗೆ ನಿರ್ಬಂಧವಿಲ್ಲ. ಮತದಾರರು ಶಿಕ್ಷಕರಾಗಿರುವುದರಿಂದ ಮದ್ಯಪಾನದ ನಿರ್ಬಂಧ ಪರಿಶೀಲನೆ, ಮದ್ಯಪಾನ ನಿರ್ಬಂಧಿಸದಿದ್ದರೆ ಶಿಕ್ಷಕರು ಮದ್ಯ ಸೇವಿಸುತ್ತಾರೆಂದು ಭಾವಿಸಬೇಕಿಲ್ಲ. ಮುಕ್ತ, ನ್ಯಾಯಸಮ್ಮತ ಮತದಾನಕ್ಕೆ ಇಷ್ಟು ದಿನದ ನಿರ್ಬಂಧ ಅಗತ್ಯವಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ಆದೇಶಿದೆ.