ಅತೀ ಹಿಂದುಳಿದ ವರ್ಗಕ್ಕೆ ಅಧಿಕಾರ ಸಿಗಬೇಕು: ಬಿ.ಕೆ.ಹರಿಪ್ರಸಾದ್

ಹಿಂದುಳಿದ ವರ್ಗದ ಕೆಲವರಿಗೆ ಮಾತ್ರ ಅಧಿಕಾರ ಸಿಗುತ್ತಿದೆ. ಆ ಅಧಿಕಾರ ಅತೀ ಹಿಂದುಳಿದ ವರ್ಗದವರಿಗೂ ಸಿಗಬೇಕೆಂಬ ಉದ್ದೇಶದಿಂದ ಸಂಘಟನೆ ಮಾಡಲಾಗುತ್ತಿದೆ. ಆಯಾ ಸಮುದಾಯದ ಸ್ವಾಮೀಜಿಗಳು ಮಾಡುತ್ತಿರುವ ಸಮಾವೇಶ ಮತ್ತು ಸಂಘಟನೆಗೆ ನಾನು ಬೆಂಬಲ ನೀಡುತ್ತಿದ್ದೇನೆ. ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಯಾವುದೇ ಅಧಿಕಾರ ಸಿಗಲಿಲ್ಲ ಎಂದು ಮಾಡುತ್ತಿಲ್ಲ. ಮಂತ್ರಿಗಿರಿಗಾಗಿ ನಾನು ಲಾಬಿ ಮಾಡುವವನೂ ಅಲ್ಲ. ಯಾವುದೇ ಮಂತ್ರಿ ಪದವಿ ಕೊಟ್ಟರೂ ಸ್ವೀಕರಿಸಲಾರೆ. ಬಿ.ಕೆ.ಹರಿಪ್ರಸಾದ್ ,ವಿಧಾನ ಪರಿಷತ್ ಸದಸ್ಯ

Update: 2023-09-07 05:00 GMT

ಶಿವಮೊಗ್ಗ: ರಾಜ್ಯದ ಹಿಂದುಳಿದ ವರ್ಗಗಳ ಸಮುದಾಯದ ಸಂಘಟನೆ ಮಾಡುತಿದ್ದು, ಜನವರಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯರೂ ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆದ ಬಿ.ಕೆ.ಹರಿಪ್ರಸಾದ್ ಹೇಳಿದರು.

ನಗರದ ಈಡಿಗ ಭವನದಲ್ಲಿ ನಡೆದ ಹಿಂದುಳಿದ ವರ್ಗದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸೆ.9 ರಂದು ಅತಿಹಿಂದುಳಿದ ವರ್ಗಗಳ ಸಮಾವೇಶದ ನಿಮಿತ್ತ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ. ಈ ಸಭೆಗೆ ರಾಜ್ಯದ ಎಲ್ಲಾ ಜಿಲ್ಲೆಯಿಂದಲೂ ಜನರು ಬರಲಿದ್ದಾರೆ. ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ. ಪ್ರಗತಿಪರ ಚಿಂತಕರೂ ಹಾಗೂ ದಲಿತ ಸಮುದಾಯದ ಜ್ಞಾನಪ್ರಕಾಶ್ ಸ್ವಾಮೀಜಿ ಬೆಂಗಳೂರಿನ ಪೂರ್ವಭಾವಿ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಎಲ್ಲ ಪಕ್ಷದ ಅತಿಹಿಂದುಳಿದ ಜಾತಿಯ ಜನರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತಿಹಿಂದುಳಿದ ಸಮುದಾಯದವರು ಬೆಂಬಲಿಸಿ ಗೆಲ್ಲಿಸಿದ್ದರಿಂದ ಸರಕಾರ ಅಧಿಕಾರಕ್ಕೆ ಬಂದಿದೆ. ಈಗ ಅಧಿಕಾರ ಕೇಳುವ ಹಕ್ಕು ನಮಗಿದೆ. ಎಲ್ಲಾ ಸಮುದಾಯದವರಿಗೂ ಅಧಿಕಾರ ಹಂಚಿಕೆಯಾಗಬೇಕು. ಹಿಂದುಳಿದ ವರ್ಗ ಎಂದರೆ ಕುರುಬರು, ಈಡಿಗರು ಮಾತ್ರ ಅಲ್ಲ ಉಳಿದ ಚಿಕ್ಕ ಸಮುದಾಯಗಳನ್ನೂ ಜತೆಯಲ್ಲಿ ಕೊಂಡೊಯ್ಯಬೇಕು. ರಾಜ್ಯದಲ್ಲಿ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವವರು ಹಿಂದುಳಿದ ಹಾಗೂ ದಲಿತ ಸಮುದಾಯದವರೇ ಹೆಚ್ಚಿದ್ದಾರೆ ಅವರಿಗೆ ಹಕ್ಕು ಪತ್ರ ಕೊಡಬೇಕಿದೆ. ಸರಕಾರಿ ಸೌಲಭ್ಯಗಳು ಅತೀ ಕಡಿಮೆ ಜನಸಂಖ್ಯೆಯಿರುವ ಜನರಿಗೆ ತಲುಪಬೇಕು. ನಮ್ಮ ಮೀಸಲಾತಿಯನ್ನೂ ಕಿತ್ತುಕೊಳ್ಳುವ ಹುನ್ನಾರಗಳು ನಡೆಯುತ್ತಿವೆ. ಈ ಎಲ್ಲದರ ವಿರುದ್ಧ ನಾವು ಸಂಘಟಿತರಾಗುವುದು ಅನಿವಾರ್ಯವಾಗಿದೆ. ಇದೊಂದು ಆಂದೋಲನವಾಗಬೇಕು. ನಿರಂತರ ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ನಾವು ಪಡೆಯಬೇಕಿದೆ. ಮಲೆನಾಡಿನ ಹಿಂದುಳಿದ ವರ್ಗಗಳ ಸಮುದಾಯ ಈ ಸಮಾವೇಶಕ್ಕೆ ಬೆಂಬಲಿಸಬೇಕೆಂದು ಮನವಿ ಮಾಡಿದರು.

ಮಲೆನಾಡು ಪ್ರಾಂತ ರೈತ ಸಂಘದ ಅಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ಅಧಿಕಾರದ ಬೆನ್ನು ಹತ್ತದೆ ರಾಜಕೀಯವನ್ನು ಒಂದು ಸಾಮಾಜಿಕ ಹೋರಾಟದಂತೆ ಪರಿಗಣಿಸಿ ಶೋಷಿತರ ಪರವಾದ ಬದ್ಧತೆ ಇರುವ ಹರಿಪ್ರಸಾದ್ ನೇತೃತ್ವದ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಮಲೆನಾಡಿನಲ್ಲಿರುವ ಶರಾವತಿ ಸಂತ್ರಸ್ಥರು, ಬಗರ್‌ಹುಕುಂ ಸಾಗುವಳಿದಾರರು ದೀವರು ಸೇರಿದಂತೆ ಹಿಂದುಳಿದ ಮತ್ತು ದಲಿತ ವರ್ಗದವರೇ ಹೆಚ್ಚಿದ್ದಾರೆ. ಸರಕಾರಗಳು ಪ್ರತಿ ಚುನಾವಣೆಯಲ್ಲಿ ಈ ಸಮುದಾಯಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಅಧಿಕಾರಕ್ಕೆ ಬಂದ ಮೇಲೆ ಮರೆಯುತ್ತಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ಭರವಸೆ ನೀಡದಂತೆ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕು. ನಾವೆಲ್ಲರೂ ಸೇರಿ ಹೋರಾಟ ಮಾಡಬೇಕಿದೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ವಿ.ರಾಜು, ಅಶೋಕ್‌ಕುಮಾರ್, ಪ್ರೊ.ರಾಚಪ್ಪ, ಪ್ರಮುಖರಾದ ಡಾ.ಸುಂದರೇಶ್, ಕಡ್ತೂರು ದಿನೇಶ್, ಶಿವಮೊಗ್ಗ ಜಿಲ್ಲಾ ಬ್ರಹ್ಮಶ್ರೀ ಆರ್ಯ ಈಡಿಗ ಮಹಿಳಾ ಸಂಘದ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ, ಎನ್.ಹೊನ್ನಪ್ಪ, ವಕೀಲ ರಾಮಚಂದ್ರ, ಈಡಿಗ ಸಂಘದ ಅಧ್ಯಕ್ಷ ಆರ್.ಶ್ರೀಧರ್, ಎಸ್ಸಿ ರಾಮಚಂದ್ರ, ಸುಮತಿ ಪೂಜಾರ್ .ಶಿವಾನಂದ, ಉದಯ್ ಕುಮಾರ್, ಕಾಗೋಡು ರಾಮಪ್ಪ ,ಡಿಕೆಶಿ ಅಭಿಮಾನಿಗಳ ಸಂಘದ ಆರ್.ಮೋಹನ್ ಸೇರಿದಂತೆ ಹಲವರು ಭಾಗವಹಿಸಿದ್ದರು.



Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News