ರಾಜ್ಯದ ಅಭಿವೃದ್ಧಿ ಹಾಗೂ ಹಿತ ರಕ್ಷಣೆಗೆ ಸಹಕಾರ ನೀಡುವುದಾಗಿ ಸಂಸದರ ಭರವಸೆ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ರಾಜ್ಯದ ಅಭಿವೃದ್ಧಿ, ಹಿತ ರಕ್ಷಣೆಗೆ ಅಗತ್ಯ ಸಹಕಾರ ನೀಡುವುದಾಗಿ ಕೇಂದ್ರ ಸಚಿವರು ಮತ್ತು ಸಂಸದರು ಭರವಸೆ ನೀಡಿದ್ದಾರೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ದಿಲ್ಲಿ ಪ್ರವಾಸದಿಂದ ವಾಪಾಸಾದ ಬಳಿಕ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯಿಸಿದರು.
"ರಾಜ್ಯದ ಅಭಿವೃದ್ಧಿ, ಬಾಕಿ ಇರುವ ಯೋಜನೆಗಳು, ಅನುದಾನದಲ್ಲಿ ನ್ಯಾಯ ಒದಗಿಸುವ, ರಾಜ್ಯದ ಬೇಡಿಕೆಗಳ ವಿಚಾರವಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯದಿಂದ ಆಯ್ಕೆಯಾಗಿರುವ ಎಲ್ಲಾ ಸಂಸದರು ಹಾಗೂ ಸಚಿವರ ಜತೆ ಚರ್ಚೆ ಮಾಡಲಾಯಿತು. ಚುನಾವಣೆ ಮುಗಿದಿದ್ದು, ರಾಜಕೀಯ ಮರೆತು ಎಲ್ಲರೂ ಒಟ್ಟಾಗಿ ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ ಎಂದು ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ ಅವರು ಸೇರಿದಂತೆ ಎಲ್ಲಾ ಸಂಸದರು ಭರವಸೆ ನೀಡಿದ್ದಾರೆ. ಯಾವುದೇ ವಿಚಾರ ಇದ್ದರೂ ನಮ್ಮನ್ನು ಭೇಟಿ ಮಾಡಿ ಚರ್ಚಿಸಿ" ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಅನುದಾನ ವಿಚಾರವಾಗಿ ಕೇಂದ್ರ ಸಚಿವರ ಜತೆ ಸಂಪರ್ಕ ಇಟ್ಟುಕೊಳ್ಳಿ ಎಂದು ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಇಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತೀನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದು, ಇಂದು ಸಂಜೆ ಗೃಹ ಸಚಿವರ ಜತೆ ಚರ್ಚೆ ನಡೆಸಲಾಗಿದೆ. ನಾಳೆ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಲಾಗುವುದು. ನಾನು ಮತ್ತೆ ದಿಲ್ಲಿಗೆ ತೆರಳಿ ಮುಖ್ಯಮಂತ್ರಿಗಳ ಜೊತೆ ಸಭೆಯಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು.
"ನಮ್ಮಿಂದ ಯಾವುದೇ ದರ ಏರಿಕೆ ಆಗಿಲ್ಲ. ಬಿಜೆಪಿಯವರು ರಾಜಕಾರಣ ಮಾಡಬೇಕಲ್ಲ ಅದಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ. ಹಾಲಿನ ದರ ವಿಚಾರದಲ್ಲಿ ಇನ್ನು ಹೆಚ್ಚಿನ ಬೆಲೆ ಏರಿಕೆ ಆಗಬೇಕಿತ್ತು. ಆದರೆ ಆಗಿಲ್ಲ. ಹೆಚ್ಚುವರಿ 50 ಎಂಎಲ್ ಹಾಲು ನೀಡಲಾಗುತ್ತಿದೆ. ಅದರ ದರ ಸೇರಿಸಲಾಗಿದೆ. ರೈತರ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ಮಾಡಲಾಗಿದೆ" ಎಂದು ತಿಳಿಸಿದರು.