‘ಮುಡಾ’ ಶೇ.50ರಷ್ಟು ನಿವೇಶನ ನೀಡಲು ಕ್ರಮವಹಿಸಿದ್ದೇ ಬಿಜೆಪಿ ಸರಕಾರ!
ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಭೂ ಮಾಲಕರು ಒಪ್ಪಿದಂತಹ ಪ್ರಕರಣಗಳಲ್ಲಿ ಶೇ.50ರಷ್ಟು ಅಭಿವೃದ್ಧಿಪಡಿಸಿದ ನಿವೇಶನಗಳನ್ನು ನೀಡಲು ಕ್ರಮವಹಿಸಲಾಗಿದೆ ಎಂದು ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಸಚಿವ ಬಿ.ಎ.ಬಸವರಾಜು ನೀಡಿರುವ ಉತ್ತರ ಇದೀಗ ಚರ್ಚೆಗೆ ಗ್ರಾಸವಾಗಿದೆ.
2021ರ ಅಧಿವೇಶನದಲ್ಲಿ ವಿಧಾನ ಪರಿಷತ್ತನ ಸದಸ್ಯ ಮರಿತಿಬ್ಬೇಗೌಡ ಅಂದಿನ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜುಗೆ ಮುಡಾ ಬದಲಿ ನಿವೇಶನದ ಕುರಿತು ಪ್ರಶ್ನೆ ಕೇಳಿದ್ದರು. ಇದಕ್ಕೆ ಸಚಿವರು ಲಿಖಿತವಾಗಿ ಉತ್ತರಿಸಿದ್ದು, ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಬಡಾವಣೆ ಅಭಿವೃದ್ಧಿಗಾಗಿ ಭೂಸ್ವಾಧೀನ ಕಾಯ್ದೆಯಡಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಕೆಲವೊಂದು ಪ್ರಕರಣಗಳಲ್ಲಿ ಭೂಮಾಲಕರು ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಧ್ಯೆ 50:50 ಒಪ್ಪಂದದ ಮುಖಾಂತರ ಭೂಮಿಯನ್ನು ವಶಪಡಿಸಿಕೊಂಡು ಬಡಾವಣೆ ರಚಿಸಲಾಗಿರುತ್ತದೆ ಎಂದು ಹೇಳಿದ್ದರು.
ಭೂಮಾಲಕರು ಒಪ್ಪಂದಂತಹ ಪ್ರಕರಣಗಳಲ್ಲಿ ಭೂಸ್ವಾಧೀನ ಕಾಯ್ದೆ-2013ರಂತೆ ಭೂಸ್ವಾಧೀನ ಪ್ರಕ್ರಿಯೆಯನ್ನು ಜರುಗಿಸಿ ಭೂಸ್ವಾಧೀನ ಪಡಿಸಿಕೊಂಡು ಪರಿಹಾರ ವಿತರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಭೂಮಾಲಕರಿಗೆ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿ ನಿವೇಶನಗಳನ್ನು ನೀಡುವುದರಿಂದ ನಿವೇಶನದ ಮೌಲ್ಯವು ಕೃಷಿ ಜಮೀನಿನ ಮೌಲ್ಯಕಿಂತ ಅಧಿಕವಾಗಿರುವುದರಿಂದ ಭೂಮಾಲಕರಿಗೆ ಲಾಭದಾಯಕವಾಗಿರುತ್ತದೆ ಎಂದು ಹೇಳಿದ್ದರು.