ಮುಡಾ ಪ್ರಕರಣ | ಸಿಎಂ ಸಿದ್ದರಾಮಯ್ಯ ಪರವಾಗಿ ಕಾಂಗ್ರೆಸ್ ಪಕ್ಷವೇ ನಿಲ್ಲಲಿದೆ : ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ: ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ, ವಿನಾ ಕಾರಣ ಬಿಜೆಪಿ-ಜೆಡಿಎಸ್ ಪಕ್ಷಗಳು ರಾಜಕಾರಣ ಮಾಡುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾಂಗ್ರೆಸ್ ಪಕ್ಷವೇ ನಿಲ್ಲಲಿದೆ ಎಂದು ಶಿಕ್ಷಣ ಸಚಿವರು, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, "ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಮುಂದಿಟ್ಟುಕೊಂಡು ಬಿಜೆಪಿ-ಜೆಡಿಎಸ್ ಜಂಟಿ ಪಾದಯಾತ್ರೆ ನಡೆಸುತ್ತಿವೆ.ಈ ಕುರಿತು ಸದನದ ಕಲಾಪದಲ್ಲೇ ಸಿಎಂ ಉತ್ತರ ನೀಡಿದ್ದಾರೆ. ಭ್ರಷ್ಟಾಚಾರ ಎಷ್ಟೇ ಪ್ರಮಾಣದಲ್ಲಿದ್ದರೂ ಭ್ರಷ್ಟಾಚಾರವೇ. ಅದರಲ್ಲಿ ಯಾವುದೇ ರಾಜಿ ಇಲ್ಲ. ಭ್ರಷ್ಟಾಚಾರದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ" ಎಂದರು.
2012ರಲ್ಲಿ ಬಿಜೆಪಿ ಪಕ್ಷವೇ ಅಧಿಕಾರದಲ್ಲಿತ್ತು. ಬಿಜೆಪಿಯವರೇ ಮುಡಾದ ಅಧ್ಯಕ್ಷರಾಗಿದ್ದರು. ನಿವೇಶನ ಹಂಚಿಕೆ ನಡೆದಾಗ ಎಲ್ಲಾ ಪಕ್ಷದವರೂ ನಿವೇಶನ ಪಡೆದಿದ್ದಾರೆ .ಆಗ ಯಾರೂ ಏನನ್ನೂ ಮಾತನಾಡಲಿಲ್ಲ. ಹಿಂದುಳಿದ ವರ್ಗದ ನಾಯಕರೊಬ್ಬರು ಸಿಎಂ ಆಗಿದ್ದನ್ನು ಸಹಿಸದೇ ಮೈತ್ರಿ ಪಕ್ಷದ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಅವರ ಬಳಿ ಮನವಿ ಮಾಡುತ್ತೇನೆ. ಬಿಜೆಪಿ ಅವಧಿಯಲ್ಲಾದ ಎಲ್ಲರ ಹಗರಣ ಹೊರಗೆ ತೆಗೆಯಬೇಕು ಎಂದು ಆಗ್ರಹಿಸಿದರು.
ಮಳೆ ಹಾನಿ ಪರಿಹಾರ:ರಾಜ್ಯದ ಎಲ್ಲಾ ಡ್ಯಾಂ ಗಳು ಭರ್ತಿಯಾಗಿವೆ. ಮಳೆ ಹೆಚ್ಚಾದ ಹಿನ್ನಲೆಯಲ್ಲಿ ಭೂ ಕುಸಿತ ಸಂಭವಿಸುತ್ತಿದೆ. ಹಾಗಾಗಿ ಜನರು ಎಚ್ಚರಿಕೆಯಿಂದ ಇರಬೇಕು. ಅಲ್ಲದೇ ಜಿಲ್ಲೆಯಲ್ಲೂ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಈ ಬಗ್ಗೆ ಡಿಸಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ಪಡೆದಿದ್ದೇನೆ. ನೆರೆಯಿಂದ ಹಾನಿಯಾದ ಜಾಗದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಪರಿಸ್ಥಿತಿ ಮೇಲೆ ಗಮನ ಹರಿಸುವಂತೆ ಸಿಎಂ ಸೂಚಿಸಿದ್ದಾರೆ. ಮಳೆಯಿಂದ ಬಿದ್ದ ಅನಧಿಕೃತ ಮನೆಗಳಿಗೆ 1.20 ಲಕ್ಷ ಹಾಗೂ ದಿನಸಿಗೆ ಸ್ಥಳೀಯ ಆಡಳಿತದ ವತಿಯಿಂದ ಆರ್ಥಿಕ ನೆರವು ನೀಡಲು ಸರ್ಕಾರ ನಿರ್ಧರಿಸಿದೆ. ಹಾಗೆಯೇ ಮನೆ ಕಳೆದುಕೊಂಡವರಿಗೆ ಹೊಸ ಮನೆ ನೀಡಲಾಗುವುದು. ಮಳೆಯಿಂದ ನೊಂದವರ ಪರ ಸರ್ಕಾರ ಇದೆ ಎಂದರು.
ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬಿ.ವೈ.ವಿಜಯೇಂದ್ರ,ಅವರ ಪಕ್ಷದ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಆರೋಪಗಳಿಗೆ ಉತ್ತರ ನೀಡಬೇಕು. ಡಿಕೆಶಿ ಬಗ್ಗೆ ಆರೋಪಿಸುವ ವಿಜಯೇಂದ್ರ ಎಲ್ಲಿದ್ದರು, ಇವರು ಏನು ಕೆಲಸ ಮಾಡುತ್ತಿದ್ದರು. ಅವರ ಆಸ್ತಿ ಎಷ್ಟು, ಅವರ ಆಸ್ತಿ ಹೇಗೆ ಬಂತು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರದ ಅನುಮತಿ:
ಶರಾವತಿ ಪಂಪ್ಡ್ ಸ್ಟೋರೇಜ್‌ಗೆ ಕೇಂದ್ರ ಅನುಮತಿ ನೀಡಿದೆ. ಈ ಯೋಜನೆಯ ಅಗತ್ಯವಿದೆ, ಇದರಿಂದ ಯಾವುದೇ ಹೆಚ್ಚಿನ ಪ್ರಮಾಣದ ಅರಣ್ಯ ಹಾನಿಯಾಗುವುದಿಲ್ಲ. ಯೋಜನೆಯಿಂದ ಹೆಚ್ಚಿನ ಪ್ರಮಾಣದ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ ಎಂದರು
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಸೇರಿದಂತೆ ಹಲವರಿದ್ದರು.