ಮೂಡಿಗೆರೆ: ಡಿ.ಬಿ.ಚಂದ್ರೇಗೌಡ ಅವರ ಅಂತಿಮ ದರ್ಶನ ಪಡೆದ ಗಣ್ಯರು
ಮೂಡಿಗೆರೆ, ನ.7: ಮಂಗಳವಾರ ಮುಂಜಾನೆ ನಿಧನರಾದ ನಾಡಿಗೆ ಹೆಸರಾಂತ ರಾಜಕಾರಣಿ, ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ ಅವರ ಮೃತ ದೇಹವ ಅಂತಿಮ ದರ್ಶನ ಪಟ್ಟಣದ ಅಡ್ಯಂತಾಯ ರಂಗಮಂದಿರಲ್ಲಿ ನಡೆಯಿತು. ಮಧ್ಯಾಹ್ನದಿಂದ ಸಂಜೆವರೆಗೂ ನಡೆದ ಅಂತಿಮ ದರ್ಶದನದಲ್ಲಿ ನಾಡಿನ ವಿವಿಧ ಪಕ್ಷಗಳ ಪ್ರಮುಖ ರಾಜಕಾರಣಿಗಳು, ಗಣ್ಯರು ಭಾಗವಹಿಸಿ ಅಂತಿಮ ದರ್ಶನ ಪಡೆದುಕೊಂಡರು.
ಮಧ್ಯಾಹ 2ರಿಂದ ಸಂಜೆ 6ಗಂಟೆವರೆಗೆ ಪಟ್ಟಣದ ಅಡ್ಯಂತಾಯ ರಂಗಮಂದಿರಲ್ಲಿ ಡಿಬಿಸಿ ಅವರ ಪಾರ್ಥೀವ ಶರೀರ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಹಾಗೂ ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಬಿಜೆಪಿಯ ಬಾವುಟವನ್ನು ಶಪ ಪೆಟ್ಟಿಗೆ ಮೇಲೆ ಹಾಕುವ ಮೂಲಕ ಡಿಬಿಸಿ ಅವರಿಗೆ ನಮನ ಸಲ್ಲಿಸಿದರು. ನಂತರ ಆಗಮಿಸಿದ ಮಾಜಿ ಸಭಾಪತಿ ರಮೇಶ್‍ಕುಮಾರ್ ಅವರು ಕೆಲ ಹೊತ್ತು ಡಿಬಿಸಿ ಅವರ ಪ್ರಾರ್ಥೀವ ಶರೀರ ವೀಕ್ಷಿಸುತ್ತಾ ಕಣ್ಣೀರಿಟ್ಟರು. ಉಳಿದಂತೆ ಕೇಂದ್ರದ ಮಾಜಿ ಸಚಿವರಾದ ಪ್ರಮೋದ್ ಮದ್ವರಾಜ್, ಡಿ.ಕೆ.ತಾರಾದೇವಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ, ಮಾಜಿ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್, ಮುಖ್ಯಮಂತ್ರಿ ಚಂದ್ರು, ಮಾಜಿ ಸಂಸದ ಜಯಪ್ರಕಾಶ್‍ಹೆಗಡೆ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಸೇರಿದಂತೆ ಎಲ್ಲಾ ಪಕ್ಷದ ನಾಯಕರು ಹಾಗೂ ಸಾರ್ವಜನಿಕರು ಡಿಬಿಸಿ ಅವರ ಅಂತಿಮ ದರ್ಶನ ಪಡೆದರು. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಡಿಬಿಸಿ ಅಂತಿಮ ದರ್ಶನಕ್ಕೆ ಆಗಮಿಸಿದ್ದರಿಂದ ಸ್ಥಳದಲ್ಲಿ ಜನಜಂಗುಳಿ ಏರ್ಪಟ್ಟಿತ್ತು.
ಡಿಬಿಸಿ ಅವರ ಪತ್ನಿ ಪೂರ್ಣಿಮಾ, ನಾಲ್ವರು ಪುತ್ರಿಯರ ಪೈಕಿ ಮೂವರು ಪುತ್ರಿಯರಾದ ಪಲ್ಲವಿ, ವೀಣಾ, ಶೃತಿ ಹಾಗೂ ಬಂದು ಈ ವೇಳೆ ಉಪಸ್ಥಿತರಿದ್ದರು. ಇನ್ನೋರ್ವ ಪುತ್ರಿ ಸಂಗೀತಾ ಅಮೇರಿಕಾದಿಂದ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಡಿಬಿಸಿ ಅಂತ್ಯ ಸಂಸ್ಕಾರವನ್ನು ಬುಧವಾರ ಮಧ್ಯಾಹ್ನ 12ಕ್ಕೆ ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ಪೂರ್ಣಚಂದ್ರ ಎಸ್ಟೇಟ್‍ನಲ್ಲಿ ನೆರವೇರಲಿದೆ.