ಮೂಡಿಗೆರೆ | ಹಿನಾರಿ ಗ್ರಾಮದ ಪರಿಶಿಷ್ಟರ ಬಡಾವಣೆಗಿಲ್ಲ ರಸ್ತೆ ಸೌಲಭ್ಯ; ಅನಾರೋಗ್ಯಪೀಡಿತರನ್ನು ಜೋಳಿಗೆಯಲ್ಲಿ ಹೊತ್ತೊಯ್ಯುತ್ತಿರುವ ನಿವಾಸಿಗಳು

Update: 2023-11-01 14:39 GMT

ಚಿಕ್ಕಮಗಳೂರು, ನ.1: ಜಿಲ್ಲೆಯ ಮಲೆನಾಡು ಭಾಗದಲ್ಲಿರುವ ಕಳಸ ತಾಲೂಕು ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ಜನಾಂಗದವರ ಸಮಸ್ಯೆಗಳಿಗೆ ಮುಕ್ತಿ ಇಲ್ಲದಂತಾಗಿದೆ.

ಮೂಡಿಗೆರೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕಳಸ ತಾಲೂಕು ಮೀಸಲು ಕ್ಷೇತ್ರದಲ್ಲಿದ್ದು, ಪರಿಶಿಷ್ಟ ಸಮುದಾಯದವರೇ ಈ ಕ್ಷೇತ್ರವನ್ನು ಹಲವು ದಶಕಗಳಿಂದ ಪ್ರತಿನಿಧಿಸುತ್ತಿದ್ದರೂ ಪರಿಶಿಷ್ಟರ ಬಡಾವಣೆಗಳ ಜನರು ರಸ್ತೆ, ನೀರು, ವಿದ್ಯುತ್, ನಿವೇಶನ, ಹಕ್ಕುಪತ್ರ, ಆಶ್ರಯ ಮನೆಯಂತಹ ಸರಕಾರಿ ಸೌಲಭ್ಯಗಳಿಂದ ವಂಚಿತಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಜಿಲ್ಲೆಯ ಕಳಸ ತಾಲೂಕಿನ ಹಿನಾರಿ ಗ್ರಾಮದ ಪರಿಶಿಷ್ಟ ಬಡಾವಣೆ ನಿವಾಸಿಗಳಿಗೆ ಇಂದಿಗೂ ರಸ್ತೆ ಸೌಲಭ್ಯ ಮರಿಚೀಕೆಯಾಗಿರುವುದು ಇದಕ್ಕೆ ಜ್ವಲಂತ ಉದಾಹರಣೆಯಾಗಿದ್ದು, ರಸ್ತೆ ಸೌಲಭ್ಯ ಇಲ್ಲದ ಕಾರಣಕ್ಕೆ ಬಡಾವಣೆಯಲ್ಲಿ ಅನಾರೋಗ್ಯಕ್ಕೆ ತುತ್ತಾದ ವ್ಯಕ್ತಿಯೊಬ್ಬರನ್ನು ಜೋಳಿಗೆಯಲ್ಲಿ ಹೊತ್ತೊಯ್ದ ಘಟನೆ ಮಂಗಳವಾರ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರ ವೈರಲ್ ಆಗಿದೆ.

ಈ ಘಟನೆ ಸಂಬಂಧ ಮೂಡಿಗೆರೆ ತಾಲೂಕಿನ ಶಾಸಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಲ ವಿರುದ್ಧ ಸಾರ್ವನಿಕರು ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.

ಮೂಡಿಗೆರೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕಳಸ ತಾಲೂಕಿನ ಕಳಸ ಪಟ್ಟಣದಿಂದ ಕೇವಲ 5ಕಿಮೀ ದೂರದಲ್ಲಿ ಹಿನಾರಿ ಗ್ರಾಮವಿದೆ. ಈ ಗ್ರಾಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೂಲದ ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು ಕಳೆದ 60 ವರ್ಷದಿಂದಲೂ ವಾಸವಾಗಿದ್ದಾರೆ. ಅಕ್ಕಪಕ್ಕದ ಮೇಲ್ವರ್ಗದ ಭೂ ಮಾಲಕರ ತೋಟಗಳ ಮಧ್ಯೆ ಇರುವ ಸರಕಾರಿ ಜಾಗದಲ್ಲಿ ಗುಡಿಸಲು, ಕಚ್ಚಾ ಮನೆಗಳಲ್ಲಿ ವಾಸ ಮಾಡುತ್ತಿರುವ ಈ ಪರಿಶಿಷ್ಟರ ಬಡಾವಣೆ ನಿವಾಸಿಗಳಿಗೆ ನಿವೇಶನ ಹಕ್ಕುಪತ್ರ, ಆಶ್ರಯ ಮನೆ, ಕುಡಿಯುವ ನೀರು, ವಿದ್ಯುತ್, ರಸ್ತೆಯಂತಹ ನಾಗರಿಕ ಸೌಲಭ್ಯಗಳು ಮರಿಚೀಕೆಯಾಗಿದೆ. ಎಲ್ಲ ನಾಗರಿಕ ಸೌಲಭ್ಯಗಳಿಂದ ಈ ಪರಿಶಿಷ್ಟರು ವಂಚಿತರಾಗಿದ್ದರೂ ಮುಖ್ಯವಾಗಿ ಈ ಪರಿಶಿಷ್ಟರ ಬಡಾವಣೆ ಸಂಪರ್ಕಕ್ಕೆ ರಸ್ತೆಯೇ ಇಲ್ಲದಿರುವುದು ನಿವಾಸಿಗಳ ನರಕಯಾತನೆಯನ್ನು ಹೆಚ್ಚಿಸಿದೆ.

 

ಹಿನಾರಿ ಪರಿಶಿಷ್ಟರ ಬಡಾವಣೆಗೆ ಹೋಗಲು ಯಾವುದೇ ಕಚ್ಚಾ ರಸ್ತೆ, ಸರಕಾರಿ ರಸ್ತೆ ಇಂದಿಗೂ ಇಲ್ಲವಾಗಿದೆ. ಈ ಬಡಾವಣೆಗೆ ಹೋಗಲು ಖಾಸಗಿ ಜಮೀನು, ಹೊಲ, ಗದ್ದೆಗಳ ಮೂಲಕ ಮಾತ್ರ ಹೋಗಬೇಕಿದೆ. ರಸ್ತೆ ಸಮಸ್ಯೆಯಿಂದಾಗಿ ಇಲ್ಲಿನ ನಿವಾಸಿಗಳ ಪೈಕಿ ಯಾರಾದರೂ ಅನಾರೋಗ್ಯಕ್ಕೆ ತುತ್ತಾದಲ್ಲಿ ಅವರನ್ನು ಸುಮಾರು 16ಕಿಮೀ ದೂರ ಹೊತ್ತುಕೊಂಡು, ಇಲ್ಲವೇ ಜೋಳಿಗೆಯಲ್ಲಿ ಕಟ್ಟಿ ಆಸ್ಪತ್ರೆಗೆ ಸಾಗಿಸಬೇಕಾದ ಧಯನೀಯ ಸ್ಥಿತಿ ಈ ನಿವಾಸಿಗಳಾಗಿದೆ. ಕಳೆದ ಮಂಗಳವಾರ ಈ ಬಡಾವಣೆಯ ನಿವಾಸಿಯೊಬ್ಬರು ಪಾಶ್ರ್ವವಾಯುಗೆ ತುತ್ತಾಗಿದ್ದು, ಈ ವೇಳೆ ಅವರನ್ನು ನಿವಾಸಿಗಳು ಜೋಳಿಗೆಯಲ್ಲಿ ಕಟ್ಟಿ ಸುಮಾರು 16ಕಿಮೀ ದೂರ ನಡೆದು ಆಸ್ಪತ್ರೆಗೆ ಸಾಗಿಸಿರುವ ಘಟನೆಯ ವಿಡಿಯೋ ವೈರಲ್ ಆಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಪರಿಶಿಷ್ಟರ ಬಡಾವಣೆ ಸಂಪರ್ಕಕ್ಕೆ ರಸ್ತೆ ನಿರ್ಮಿಸಿದಲ್ಲಿ ಕೇವಲ 5 ಕಿಮೀ ಮೂಲಕ ಕಳಸ ಪಟ್ಟಣ ತಲುಪಬಹುದು. ಆದರೆ ಕಳೆದ ಅನೇಕ ದಶಕಗಳಿಂದ ರಸ್ತೆ ನಿರ್ಮಾಣದ ಬೇಡಿಕೆಗೆ ಯಾರೂ ಸ್ಪಂದಿಸದಿರುವುದರಿಂದ ನಿವಾಸಿಗಳು ಇಂದಿಗೂ ಕಾಲು ದಾರಿಯಲ್ಲಿ ನಡೆದುಕೊಂಡು ಕಳಸ ಪಟ್ಟಣಕ್ಕೆ ಬಂದು ಹೋಗುವಂತಾಗಿದೆ.

ರಸ್ತೆ ನಿರ್ಮಿಸಿಕೊಡುವಂತೆ ನಿವಾಸಿಗಳು ಕಳಸ ಗ್ರಾಪಂ ಸೇರಿದಂತೆ ಕ್ಷೇತ್ರದ ಹಾಲಿ, ಮಾಜಿ ಶಾಸಕರೂ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೂ ಮನವಿ ಮಾಡಿದ್ದರೂ ಪರಿಶಿಷ್ಟರ ಪ್ರಮುಖ ಸಮಸ್ಯೆಯಾಗಿರುವ ಸುಸಜ್ಜಿತ ರಸ್ತೆ ನಿರ್ಮಾಣದ ಬೇಡಿಕೆ ಇಂದಿಗೂ ಈಡೇರಿಲ್ಲ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

-----------------------------------------------------------

ʼʼನಾವು ಹಿನಾರಿ ಗ್ರಾಮದಲ್ಲಿ ಅನಾದಿಕಾಲದಿಂದಲೂ ವಾಸಿಸುತ್ತಿದ್ದೇವೆ. ಗ್ರಾಮದಲ್ಲಿ 15ಕ್ಕೂ ಹೆಚ್ಚು ಪರಿಶಿಷ್ಟ ಕುಟುಂಬಗಳು ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದೇವೆ. ನಮ್ಮ ಮನೆಗಳನ್ನು ತಲುಪಲು ರಸ್ತೆ ಸೌಲಭ್ಯ ಇದುವರೆಗೂ ನಿರ್ಮಿಸಿಲ್ಲ. ಸರಕಾರಿ ಸೌಲಭ್ಯಗಳು ನಮಗೆ ಸಿಗುತ್ತಿಲ್ಲ. ಮುಖ್ಯವಾಗಿ ನಮಗೆ ರಸ್ತೆ ಸೌಲಭ್ಯ ಬೇಕು. ರಸ್ತೆ ಇಲ್ಲದಿರುವುದರಿಂದ ಖಾಸಗಿಯವರ ಜಮೀನುಗಳಲ್ಲಿ ತಿರುಗಾಡುವ ಪರಿಸ್ಥಿತಿ ಇದೆ. ಯಾರಾದರೂ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಹೋಗಬೇಕಿದ್ದರೇ ಬೆಡ್‍ಶೀಟ್‍ನಲ್ಲಿ ಕಟ್ಟಿ ಎತ್ತಿಕೊಂಡು ಹೋಗಬೇಕು. 5ಕಿಮೀ ದೂರ ಹೋಗಲು ನಾವು 16ಕಿಮೀ ಸುತ್ತಿಕೊಂಡು ಕಳಸ ಪಟ್ಟಣಕ್ಕೆ ಹೋಗಬೇಕಾಗಿದೆ. ನಮ್ಮ ಸಮಸ್ಯೆ ಬಗ್ಗೆ ಎಲ್ಲ ಜನಪ್ರತಿನಿಧಿಗಳಿಗೂ ಮಾಹಿತಿ ಇದ್ದರೂ ರಸ್ತೆ ನಿರ್ಮಿಸಿಕೊಡುತ್ತಿಲ್ಲʼʼ

- ನಾಗೇಶ್, ಹಿನಾರಿ ಪರಿಶಿಷ್ಟ ಬಡಾವಣೆ ನಿವಾಸಿ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News