ರೈತರ ಕುರಿತ ನನ್ನ ಹೇಳಿಕೆ ತಿರುಚಿದ್ದು, ನಾನು ಆ ಅರ್ಥದಲ್ಲಿ ಹೇಳಿಲ್ಲ: ಸಚಿವ ಶಿವಾನಂದ ಪಾಟೀಲ್
ವಿಜಯಪುರ: ರೈತರು ಬರಗಾಲ ಬಯಸುತ್ತಾರೆ ಎಂಬ ರೀತಿಯಲ್ಲಿ ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ಆದರೆ, ನಾನು ರೈತರ ಭಾವನೆಗಳಿಗೆ ಧಕ್ಕೆಯಾಗುವ ಅರ್ಥದಲ್ಲಿ ಹೇಳಿಲ್ಲ ಎಂದು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರದ ಕೆಲ ನೀತಿಗಳು ರೈತರಿಗೆ ಮಾರಕವಾಗಿದ್ದು, ಇದರಿಂದ ರೈತರ ಬೆಳೆಗಳಿಗೆ 3 ವರ್ಷಗಳಿಗೊಮ್ಮೆ ಬೆಲೆ ಬರುತ್ತದೆ. ಅದಕ್ಕೆ ಮೇಲಿಂದ ಮೇಲೆ ಬರಗಾಲ ಬಿದ್ದರೆ, ಸಾಲ ಮನ್ನಾವಾಗಬೇಕೆಂಬ ಬೇಡಿಕೆ ಸ್ವಾಭಾವಿಕ. ಇದರ ಬದಲಿಗೆ ರೈತರೇ ಸರಕಾರಕ್ಕೆ ಸಾಲ ಕೊಡುವಂತಹ ಶಕ್ತಿ ಬರಬೇಕೆಂಬ ನಿಟ್ಟಿನಲ್ಲಿ ನಾನು ಉಲ್ಲೇಖಿಸಿದ್ದೇ ಎಂದು ವಿವರಿಸಿದರು.
ರಾಜ್ಯದ ವಿರೋಧ ಪಕ್ಷದವರಿಗೆ ಕೆಲಸ ಇಲ್ಲ. ರೈತರ ಮನವೊಲಿಸಿ ಬೇರೆ, ಬೇರೆ ಹೇಳಿಕೆ ಕೊಟ್ಟು. ನನ್ನ ವಿರುದ್ಧ ರೈತರನ್ನು ಎತ್ತಿಕಟ್ಟುವಂತಹದ್ದು, ಕಾಂಗ್ರೆಸ್ ಸರಕಾರದ ವಿರೋಧ ಕಟ್ಟುವಂತಹದ್ದು ನಿರಂತರವಾಗಿ ಮಾಡುತ್ತಿದ್ದಾರೆ. ಇದನ್ನು ಮಾಡುವ ಬದಲಿಗೆ ರೈತರ ಬಗ್ಗೆ ಕಾಳಜಿ ಇದ್ದರೆ, ಕೇಂದ್ರರಿಂದ ನೀರಾವರಿಗೆ ದುಡ್ಡು ಕೊಡಿಸಲಿ. ದೇವೇಗೌಡರು ಮಾಡಿದ ಎಐಪಿಪಿ ಯೋಜನೆ ಯಾಕೆ ಬಂದ್ ಮಾಡಿದ್ದು?. ಕಬ್ಬಿನ ಬೆಲೆ ಇವತ್ತು 3,500 ರೂ. ಮೇಲೆ ಇರಬೇಕಿತ್ತು. ಅವರಿಗೆ ಸಹಾಯ ಮಾಡಲು ಆಗುತ್ತಿಲ್ಲ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡುವ ಯೋಜನೆಯನ್ನು ನಮ್ಮ ಡಿಸಿಸಿ ಬ್ಯಾಂಕ್ ಮಾಡಿದೆ ಎಂದು ಹೇಳಿದರು.
ಇನ್ನೂ, ರೈತರು ಸ್ವಾವಲಂಬಿಗಳಾಗಿ ಬದುಕಬೇಕು. ಯಾವುದೇ ಸರಕಾರದ ಯೋಜನೆಗಳ ಮೇಲೆ ಅವಲಂಬಿತರಾಗಿ ಬದುಕಬಾರದೆನ್ನುವುದು ನನ್ನ ಹೇಳಿಕೆಯಾಗಿತ್ತು. ಇದರಂತೆ ಸರಕಾರಗಳ ನೀತಿ ನಿರೂಪಣೆ ಇರಬೇಕು. ಆ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಕ್ಕೆ ಕೊಡುಗೆ ಕೊಟ್ಟಿದಾರೆ. ರೈತರಿಗೆ ನೀರು, ವಿದ್ಯುತ್, ರಸಗೊಬ್ಬರ, ಬೀಜದ ಸೌಲಭ್ಯಗಳನ್ನು ಮಾಡಿಕೊಟ್ಟಿದ್ದಾರೆ. ಆದರೆ, ದುರ್ದೈವವಶಾತ್ ಕೇಂದ್ರ ಸರಕಾರದ ಇತ್ತೀಚಿನ ನೀತಿಗಳು ರೈತರಿಗೆ ಮಾರಕವಾಗಿವೆ ಎಂದು ಟೀಕಿಸಿದರು.