ಮೈಸೂರು, ಶಿವಮೊಗ್ಗ, ತುಮಕೂರು ಮಹಾನಗರ ಪಾಲಿಕೆಗೆ ಮುಂದಿನ ವಾರವೇ ಚುನಾವಣಾ ದಿನಾಂಕ ಪ್ರಕಟ: ರಾಜ್ಯ ಚುನಾವಣಾ ಆಯುಕ್ತ

Update: 2024-08-08 13:58 GMT

ರಾಜ್ಯ ಚುನಾವಣಾ ಆಯುಕ್ತ ಜಿ.ಆರ್.ಸಂಗ್ರೇಶಿ

ಬೆಂಗಳೂರು : ಮೈಸೂರು, ಶಿವಮೊಗ್ಗ ಹಾಗೂ ತುಮಕೂರು ಮಹಾನಗರ ಪಾಲಿಕೆಗಳಿಗೆ ಮುಂದಿನ ವಾರವೇ ಚುನಾವಣಾ ದಿನಾಂಕ ಪ್ರಕಟಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಆರ್.ಸಂಗ್ರೇಶಿ ತಿಳಿಸಿದರು.

ಗುರುವಾರ ನಗರದ ಬಳ್ಳಾರಿ ರಸ್ತೆಯಲ್ಲಿರುವ ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೂರು ಪಾಲಿಕೆಗಳಿಗೆ ಚಾಲ್ತಿಯಲ್ಲಿರುವ ಕ್ಷೇತ್ರ ವಿಂಗಡಣೆ ಮತ್ತು ಮೀಸಲಾತಿಯನ್ವಯ ಚುನಾವಣೆ ನಡೆಸಲು ಆಯೋಗವು ಸಿದ್ಧತೆಗಳನ್ನು ಕೈಗೊಂಡಿದೆ. ಅಕ್ಟೋಬರ್ ಅಥವಾ ನವೆಂಬರ್ ಅಂತ್ಯಕ್ಕೆ ಈ ಪಾಲಿಕೆಗಳಲ್ಲಿ ಚುನಾಯಿತಿ ಪ್ರತಿನಿಧಿಗಳು ಇರಬೇಕು ಎಂಬುದು ನಮ್ಮ ಬಯಕೆ ಎಂದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಸದಸ್ಯರ ಆಡಳಿತ ಅವಧಿಯು 2020ರ ಸೆ.10ಕ್ಕೆ ಮುಕ್ತಾಯಗೊಂಡಿದೆ. ಬಿಬಿಎಂಪಿಯ ವಾರ್ಡುಗಳ ಸಂಖ್ಯೆಯನ್ನು 198 ರಿಂದ 243ಕ್ಕೆ ಹೆಚ್ಚಿಸಲಾಗಿತ್ತು. 2022ರ ಮೇ 20ರಂದು ಸುಪ್ರೀಂಕೋರ್ಟ್ ಹೊರಡಿಸಿದ ಆದೇಶದಲ್ಲಿ ಎಂಟು ವಾರಗಳ ಕಾಲಾವಧಿಯ ಒಳಗಾಗಿ ಬಿಬಿಎಂಪಿಯ 243 ವಾರ್ಡುಗಳ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಒದಗಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿತ್ತು ಎಂದು ಅವರು ಹೇಳಿದರು.

ಅಲ್ಲದೇ, 2022ರ ಡಿ.9ರಂದು ನೀಡಿದ ಮತ್ತೊಂದು ಆದೇಶದಲ್ಲಿ ಸುಪ್ರೀಂಕೋರ್ಟ್, ಮೂರು ತಿಂಗಳ ಒಳಗಾಗಿ ಮೀಸಲಾತಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಒದಗಿಸುವಂತೆ ನಿರ್ದೇಶನ ನೀಡಿತ್ತು. ಈ ಹಂತದಲ್ಲಿ ಕ್ಷೇತ್ರ ವಿಂಗಡಣೆಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣಗಳ ವಿಚಾರಣಾ ಸಮಯದಲ್ಲಿ ಕ್ಷೇತ್ರ ವಿಂಗಡಣೆಯ ಬಗ್ಗೆ ಪುನರ್ ಪರಿಶೀಲಿಸಲು ನೀಡಿದ ಸೂಚನೆಯಂತೆ ಸರಕಾರವು ವಾರ್ಡುಗಳ ಸಂಖ್ಯೆಯನ್ನು 225ಕ್ಕೆ ಮರು ನಿಗದಿಪಡಿಸಿ 2023ರ ಸೆ.25ರಂದು ಪ್ರಕಟಿಸಿದೆ ಎಂದು ಸಂಗ್ರೇಶಿ ತಿಳಿಸಿದರು.

ಹಿಂದುಳಿದ ವರ್ಗಗಳ ಮೀಸಲಾತಿ ನಿಗದಿಪಡಿಸುವ ಸಂಬಂಧ ಸರಕಾರ ರಚಿಸಿದ್ದ ಆಯೋಗವು ಸಲ್ಲಿಸಿದ ವರದಿ ಅನುಸರಿಸಿ ಬಿಬಿಎಂಪಿಯ 225 ವಾರ್ಡುಗಳಿಗೆ ಮೀಸಲಾತಿಯನ್ನು ಸರಕಾರ ಪ್ರಕಟಿಸುವುದು ಬಾಕಿಯಿದೆ. ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ದಾಖಲಾಗಿರುವ ಪ್ರಕರಣದ ಮುಂದಿನ ವಿಚಾರಣೆಯು ಆ.20ಕ್ಕೆ ನಿಗದಿಯಾಗಿದೆ. ನಮಗೆ ಮೀಸಲಾತಿ ಒದಗಿಸಿದ ಕೂಡಲೆ ಚುನಾವಣೆ ನಡೆಸಲು ಆಯೋಗ ಸಿದ್ಧವಿದೆ ಎಂದು ಅವರು ಹೇಳಿದರು.

2016ರ ಫೆಬ್ರವರಿಯಲ್ಲಿ ಆಯ್ಕೆಯಾದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ಅವಧಿಯು 2021ರ ಎಪ್ರಿಲ್ ತಿಂಗಳಲ್ಲಿ ಮುಕ್ತಾಯಗೊಂಡಿದೆ. 2011ರ ಜನಗಣತಿಯಂತೆ 232 ತಾಲೂಕು ಪಂಚಾಯಿತಿಗಳಿಗೆ 3285 ಸದಸ್ಯ ಸ್ಥಾನಗಳು ಮತ್ತು 30 ಜಿಲ್ಲಾ ಪಂಚಾಯಿತಿಗಳಿಗೆ 1191 ಸದಸ್ಯರ ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ವಿಳಂಬವಾಗುತ್ತಿರುವ ಸಂಬಂಧ 2021ರ ನ.12ರಂದು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ ಎಂದು ಸಂಗ್ರೇಶಿ ತಿಳಿಸಿದರು.

ಕೊಡಗು ಜಿಲ್ಲೆಯ ಕ್ಷೇತ್ರ ವಿಂಗಡಣೆ ಹಾಗೂ ಎಲ್ಲ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಮೀಸಲಾತಿಯನ್ನು ಹೊರಡಿಸದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಸರಕಾರದ ವಿರುದ್ಧ ನ್ಯಾಯಾಂಗ ನಿಂದನಾ ಅರ್ಜಿ ದಾಖಲಿಸಿದೆ. ಈ ಪ್ರಕರಣದ ವಿಚಾರಣೆಯು ಆ.12ರಂದು ನಿಗದಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯ ಸರಕಾರವು ಕಾಲಕಾಲಕ್ಕೆ ಚುನಾವಣೆ ಮಾಡದೆ ಹೋದರೆ, ನಾವು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ ರಿಟ್‌ಗಳನ್ನು ಹಾಕಿ ರಾಜ್ಯ ಸರಕಾರಕ್ಕೆ ನಿರ್ದೇಶನ ಕೊಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ರಾಜ್ಯ ಸರಕಾರವು ಬಿಬಿಎಂಪಿ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಿಗೆ ಆದಷ್ಟು ಬೇಗ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಸಹಕಾರ ನೀಡಬೇಕು ಎಂದು ಸಂಗ್ರೇಶಿ ಹೇಳಿದರು.

ಸರಕಾರ ಬಿಬಿಎಂಪಿಗೆ ಮೀಸಲಾತಿ ಪಟ್ಟಿ ಕಳುಹಿಸಿದ್ದರೆ ನಾವು ಚುನಾವಣೆ ನಡೆಸಲು ಸಿದ್ಧ. ಆದರೆ, ರಾಜ್ಯ ಸರಕಾರದಿಂದ ಈ ಬಗ್ಗೆ ಯಾವುದೆ ಪತ್ರ ವ್ಯವಹಾರ ಆಗಿಲ್ಲ. ಸರಕಾರ ಸಹಕಾರ ನೀಡಿದರೆ ಬಿಬಿಎಂಪಿ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಿಗೆ 6-7 ತಿಂಗಳಲ್ಲಿ ಚುನಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಿದ್ಧವಿದ್ದೇವೆ ಎಂದು ಅವರು ಹೇಳಿದರು.

2100 ಕೋಟಿ ರೂ.ಸಿಗುವುದಿಲ್ಲ: ನಾಲ್ಕು ವರ್ಷಗಳಿಂದ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳು, ಬಿಬಿಎಂಪಿಗೆ ಚುನಾವಣೆ ನಡೆಸದೆ ಇರುವುದರಿಂದ 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರಬೇಕಿರುವ 2100 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡುತ್ತಿಲ್ಲ. ಚುನಾವಣೆ ನಡೆಸಿದರೆ ಮಾತ್ರ ಈ ಹಣ ಬಿಡುಗಡೆ ಮಾಡುವುದಾಗಿ ಹಣಕಾಸು ಆಯೋಗವು ಷರತ್ತು ವಿಧಿಸಿದೆ. ಮುಂದಿನ ಫೆಬ್ರವರಿ, ಮಾರ್ಚ್ ವೇಳೆಗೆ ಚುನಾವಣೆ ನಡೆಸದಿದ್ದರೆ ಈ ಹಣ ರಾಜ್ಯಕ್ಕೆ ಸಿಗುವುದಿಲ್ಲ ಎಂದು ಸಂಗ್ರೇಶಿ ತಿಳಿಸಿದರು.

ರಾಜ್ಯ ಸರಕಾರ ಬೆಂಗಳೂರಿಗೆ ಸಂಬಂಧಿಸಿದಂತೆ ಈಗಿರುವ 225 ವಾರ್ಡುಗಳನ್ನು 400 ವಾರ್ಡುಗಳನ್ನಾಗಿಯಾದರೂ ಮಾಡಲಿ, ಗ್ರೇಟರ್ ಬೆಂಗಳೂರು ಅಥಾರಿಟಿಯಾದರೂ ಮಾಡಲಿ. ಅದಕ್ಕೂ ನಮಗೂ ಸಂಬಂಧವಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ದಾಖಲಾಗಿರುವ ಪ್ರಕರಣ ಇತ್ಯರ್ಥಗೊಂಡು, ತೀರ್ಪು ನಮ್ಮ ಪರವಾಗಿ ಬಂದಲ್ಲಿ, ನಾವು ಬಿಬಿಎಂಪಿಗೆ ಚುನಾವಣೆ ನಡೆಸಲು ಸಿದ್ಧತೆಗಳನ್ನು ಆರಂಭಿಸುತ್ತೇವೆ ಎಂದು  ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಆರ್.ಸಂಗ್ರೇಶಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News