ಅ.3 ರಂದು ಮೈಸೂರು ದಸರಾ ಉದ್ಘಾಟನೆ

Update: 2024-08-12 15:55 GMT

ಬೆಂಗಳೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವವು ಅಕ್ಟೋಬರ್ 3ರಿಂದ 12ರ ವರೆಗೆ ನಡೆಸಲಾಗುವುದು. ದಸರಾ ಮಹೋತ್ಸವವು ಜನರ ಉತ್ಸವವಾಗುವ ರೀತಿಯಲ್ಲಿ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ‘ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2024’ರ ಉನ್ನತ ಮಟ್ಟದ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಅ.3ರಂದು ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9.15ಕ್ಕೆ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಆ.21ರಂದು ಬೆಳಗ್ಗೆ 10.10 ಗಂಟೆಗೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪೂಜೆ ಮಾಡಲಾಗುವುದು. ಸಂಪ್ರದಾಯದಂತೆ 9 ದಿನ ಕಾರ್ಯಕ್ರಮಗಳು ಹಾಗೂ 10ನೇ ದಿನ ಜಂಬೂ ಸವಾರಿ ಏರ್ಪಾಡು ಮಾಡಲಾಗತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

ಕಳೆದ ಬಾರಿ ಬರಗಾಲ ಇತ್ತು ಆದುದರಿಂದ ಸರಳವಾಗಿ ಆಚರಣೆ ಮಾಡಿದೆವು. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿ, ಬಿತ್ತನೆ ಕಾರ್ಯ ನಡೆದಿದೆ. ರೈತರು ಹರ್ಷಚಿತ್ತರಾಗಿದ್ದಾರೆ. ನಾಡಿನ ಎಲ್ಲ ಜಲಾಶಯಗಳು ಭರ್ತಿಯಾಗಿವೆ. ಆದುದರಿಂದ, ಈ ಬಾರಿ ದಸರಾವನ್ನು ವಿಜೃಂಭಣೆ, ಆಕರ್ಷಕ, ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ದಸರಾ ಮಹೋತ್ಸವವನ್ನು ಯಾರು ಉದ್ಘಾಟನೆ ಮಾಡಬೇಕು ಎಂದು ನಿರ್ಧರಿಸುವ ಅಧಿಕಾರವನ್ನು ಉನ್ನತ ಮಟ್ಟದ ಸಮಿತಿ ನನಗೆ ಅಧಿಕಾರ ನೀಡಿದೆ. ಇನ್ನೆರಡು ಮೂರು ದಿನಗಳಲ್ಲಿ ದಸರಾ ಉದ್ಘಾಟಕರ ಹೆಸರನ್ನು ಘೋಷಣೆ ಮಾಡುತ್ತೇನೆ. ಸದ್ಯಕ್ಕೆ ನನಗೆ ಯಾರೊಬ್ಬರೂ ಯಾವ ಹೆಸರನ್ನು ಶಿಫಾರಸ್ಸು ಮಾಡಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ದಸರಾ ಉದ್ಘಾಟನೆಯ ದಿನದಂದೇ ಸಾಂಸ್ಕೃತಿಕ ಕಾರ್ಯಕ್ರಮಗಳು, ದೀಪಾಲಂಕಾರ, ವಸ್ತು ಪ್ರದರ್ಶನ, ಕುಸ್ತಿ ಪ್ರದರ್ಶನ, ಯುವ ದಸರಾ, ಕ್ರೀಡಾ ಚಟುವಟಿಕೆಗಳು ಆರಂಭವಾಗಬೇಕು. ವಸ್ತು ಪ್ರದರ್ಶನದಲ್ಲಿ ಯಾವುದೆ ಮಳಿಗೆ ಖಾಲಿ ಇರಬಾರದು. ಈ ವಸ್ತು ಪ್ರದರ್ಶನದಲ್ಲಿ ಸರಕಾರದ ಸಾಧನೆಗಳನ್ನು ಬಿಂಬಿಸಲು ಆಯಾ ಇಲಾಖೆಯವರು ಹೆಚ್ಚು ಒತ್ತು ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.

ದೀಪಾಲಂಕಾರ ದಸರಾ ಆರಂಭದಿಂದ ಒಟ್ಟು 21 ದಿನಗಳ ಕಾಲ ಇರಬೇಕು ಎಂದು ಸೂಚಿಸಲಾಗಿದೆ. ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಲಾಗಿದ್ದು, ಅತ್ಯಂತ ಆಕರ್ಷಕ ರೀತಿಯಲ್ಲಿ ದೀಪಾಲಂಕಾರ ಮಾಡುವುದಾಗಿ ಅವರು ಭರವಸೆ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ದಸರಾ ವೀಕ್ಷಿಸಲು ಬರುವಂತಹ ಪ್ರವಾಸಿಗರಿಗೆ ಅಗತ್ಯ ಮಾರ್ಗದರ್ಶನ ನೀಡಲು ಟೂರಿಸ್ಟ್ ಮಿತ್ರ ಮತ್ತು ಹೋಂ ಗಾರ್ಡ್‍ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಲಾಗುವುದು. ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಮೈಸೂರನ್ನು ಕೇಂದ್ರವಾಗಿರಿಸಿಕೊಂಡು ಕೆಎಸ್ಸಾರ್ಟಿಸಿ ಸಹಯೋಗದೊಂದಿಗೆ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಸಕ್ರ್ಯುಟ್ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಕಾರ್ಯಕಾರಿ ಸಮಿತಿಯಲ್ಲಿ ಮೈಸೂರು ಜಿಲ್ಲಾಧಿಕಾರಿ ಕಾರ್ಯದರ್ಶಿ ಯಾಗಿರುತ್ತಾರೆ. ಸ್ಥಳೀಯವಾಗಿ ಈ ಸಮಿತಿಯೂ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ದಸರಾ ಸಂದರ್ಭದಲ್ಲಿ ವಿತರಿಸಲಾಗುವ ಗೋಲ್ಡ್ ಕಾರ್ಡುಗಳು ದುರುಪಯೋಗವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕಳೆದ ಬಾರಿ ದಸರಾ ಆಚರಣೆಗೆ 30 ಕೋಟಿ ರೂ.ಗಳನ್ನು ಒದಗಿಸಲಾಗಿತ್ತು. ಈ ಬಾರಿ ವಿಜೃಂಭಣೆಯಿಂದ ಆಚರಣೆ ಮಾಡಲು ಅಗತ್ಯವಿರುವಷ್ಟು ಅನುದಾನ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಸಭೆಯಲ್ಲಿ ಸಿಎಂ ನೀಡಿದ ಇತರೆ ಸೂಚನೆಗಳು:

ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಬೇಕು. ಟ್ಯಾಬ್ಲೋಗಳು ಹೆಚ್ಚು ಆಕರ್ಷಕ ಮತ್ತು ಅರ್ಥಪೂರ್ಣವಾಗಿರಬೇಕು. ಕಲೆ, ಸಂಸ್ಕೃತಿ, ಸಾಹಿತ್ಯ, ಕ್ರೀಡೆ, ಆಹಾರ, ವಸ್ತು ಪ್ರದರ್ಶನ, ಕುಸ್ತಿ ಪ್ರದರ್ಶನ, ದೀಪಾಂಲಕಾರ ಸೇರಿ ಪ್ರತಿಯೊಂದೂ ಆಕರ್ಷಣೀಯ ಮತ್ತು ಅರ್ಥಪೂರ್ಣ ಆಗಿರಬೇಕು. ಗ್ಯಾರಂಟಿ ಯೋಜನೆಗಳು ಮತ್ತು ಸರಕಾರದ ಸಾರ್ಥಕ ಕೆಲಸಗಳ ಪ್ರದರ್ಶನ ಮತ್ತು ತಿಳಿವಳಿಕೆ ಮೂಡಿಸಬೇಕು ಎಂದು ಮುಖ್ಯಮಂತ್ರಿ ಸೂಚನೆ ನೀಡಿದರು.

ಟ್ಯಾಬ್ಲೋಗಳಲ್ಲಿ ಹೊಸತನ ಇರಲಿ. ಯುವ ದಸರಾ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲೆ, ಪ್ರತಿಭೆ ಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಗೋಲ್ಡ್ ಕಾರ್ಡ್ ಗಳನ್ನು ಮುಂಚಿತವಾಗಿ ಸಿದ್ಧಪಡಿಸಬೇಕು. ಪಾಕಿರ್ಂಗ್, ಟ್ರಾಫಿಕ್, ಬಂದೋಬಸ್ತ್ ಕಡೆಗೆ ಪೊಲೀಸ್ ಇಲಾಖೆ ಹೆಚ್ಚಿನ ಗಮನ ಕೊಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ಸಂಭ್ರಮ 50 ನವೆಂಬರ್ ವರೆಗೂ ನಡೆಯಲಿದೆ. ದಸರಾದಲ್ಲಿ ಇದನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯಕ್ರಮ ರೂಪಿಸಬೇಕು. ವೈಮಾನಿಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು ಮನವಿ ಮಾಡಲಾಗುವುದು. ಸ್ವಲ್ಪ ಹೆಚ್ಚಿನ ಸಮಯ ಏರ್ ನಡೆಸಲೂ ವಿನಂತಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ವಿದ್ಯುದ್ದೀಪಗಳಿಂದ ಝಗಮಗಿಸಲಿದೆ ಮೈಸೂರು

ದಸರಾ ಮಹೋತ್ಸವದ ಪ್ರಯುಕ್ತ ಮೈಸೂರಿನ ಪ್ರಮುಖ ರಸ್ತೆಗಳು ಮತ್ತು ವೃತ್ತಗಳು ಈ ಬಾರಿಯೂ ವಿದ್ಯುದ್ದೀಪಗಳಿಂದ ಝಗಮಗಿಸಲಿದೆ. ದಸರಾ ಉತ್ಸವ ಆರಂಭಕ್ಕೆ ಒಂದು ದಿನ ಮೊದಲೇ ಅಂದರೆ ಅ.2ರಿಂದ 21 ದಿನಗಳ ಕಲಾ ದೀಪಾಲಂಕಾರ ಮಾಡಲು ನಿರ್ಧರಿಸಲಾಗಿದೆ. 130 ಕಿ.ಮೀ.ರಸ್ತೆಗಳ ಉದ್ದಕ್ಕೂ ದೀಪಗಳು ಬೆಳಗಲಿವೆ. 84 ವೃತ್ತಗಳು, ಉದ್ಯಾನವನ ಸೇರಿದಂತೆ ಪ್ರಮುಖ 64 ಸ್ಥಳಗಳಲ್ಲಿ ವಿದ್ಯುತ್ ದೀಪಗಳು ಕಂಗೊಳಿಸಲಿವೆ. ಹಸಿರು ಚಪ್ಪರ, ಸುಸ್ವಾಗತ, ವಿವಿಧ ಕಮಾನುಗಳು, ನಿಗಮದ ಕಚೇರಿಗಳ ದೀಪಾಲಂಕಾರ, ಛಾಯಾಗ್ರಹಣ ಮತ್ತು ಸಮಾರಂಭಗಳ ವೇದಿಕೆ ಮತ್ತಿತರೆಡೆ ವಿದ್ಯುತ್ ದೀಪಾಲಂಕಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

-ಕೆ.ಜೆ.ಜಾರ್ಜ್, ಇಂಧನ ಸಚಿವ

ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ರಾಜ ವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾವು ಕಾನೂನು ಮಾಡಿದ್ದೇವೆ. ಅವರು ತಡೆಯಾಜ್ಞೆ ತಂದಿದ್ದಾರೆ. ಈ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News