ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮಕ್ಕೆ 'ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ'

Update: 2023-12-21 10:26 GMT

ಬೆಂಗಳೂರು, ಡಿ.21: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮವು ಕೇಂದ್ರ ಇಂಧನ ಸಚಿವಾಲಯದ ಪ್ರತಿಷ್ಠಿತ 'ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ 2023'ಕ್ಕೆ ಪಾತ್ರವಾಗಿದೆ.

ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಅಂಗವಾಗಿ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ ದಿಲ್ಲಿಯ ವಿಜ್ಞಾನ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಕ್ರೆಡಲ್ನ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ಪ್ರಶಸ್ತಿ ಸ್ವೀಕರಿಸಿದರು.

ವಿವಿಧ ರಾಜ್ಯಗಳಲ್ಲಿ ಇಂಧನ ದಕ್ಷತೆಗೆ ರಾಜ್ಯಗಳಲ್ಲಿ ಜಾರಿಗೊಳಿಸಿರುವ ಕಾರ್ಯಕ್ರಮಗಳ ಕುರಿತಂತೆ ಆಯಾ ರಾಜ್ಯ ಸರಕಾರಗಳ ವಿವಿಧ ಇಲಾಖೆಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ಪ್ರಶಸ್ತಿ ನೀಡಲಾಗುತ್ತದೆ. ಇಂಧನ ದಕ್ಷತೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಕರ್ನಾಟಕಕ್ಕೆ ಈ ಬಾರಿಯ ಪ್ರಶಸ್ತಿ ದೊರೆತಿದೆ.

ಸಂತಸ ವ್ಯಕ್ತಪಡಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್

ರಾಜ್ಯಕ್ಕೆ ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿ ಸಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಇಂಧನ ಸಚಿವ ಕೆ.ಜೆ. ಜಾರ್ಜ್, "ಈ ಪ್ರಶಸ್ತಿಯ ಹಿಂದೆ ಕ್ರೆಡಲ್ ಅಧಿಕಾರಗಳ ಶ್ರಮವಿದೆ. ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ," ಎಂದಿದ್ದಾರೆ.

"ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ಸವಾಲುಗಳನ್ನು ಎದುರಿಸುವಲ್ಲಿ ಇಂಧನ ಸಂರಕ್ಷಣೆ ನಿರ್ಣಾಯಕ ಪಾತ್ರ ವಹಿಸುತ್ತದೆ. ನಮ್ಮ ಇಲಾಖೆಯು ಇಂಧನ ಸಂರಕ್ಷಣೆ, ಸ್ವಚ್ಛ ಮತ್ತು ಹಸಿರು ಇಂಧನ ಉಪಕ್ರಮಗಳಿಗೆ ಒತ್ತು ನೀಡುತ್ತದೆ. ಇಂಧನ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಇನ್ನೂ ಹೆಚ್ಚಿನ ದಕ್ಷತೆ ಸಾಧಿಸುವ ಬಗ್ಗೆ ಗಮನ ಹರಿಸಲಾಗುವುದು," ಎಂದು ಸಚಿವರು ತಿಳಿಸಿದ್ದಾರೆ.

"ಇಂಧನ ದಕ್ಷತೆಯ ನೀತಿ ಅನುಷ್ಠಾನದಲ್ಲಿ ಕರ್ನಾಟಕ ಮುಂದಿದೆ. ಇಂಧನ ಸಂರಕ್ಷಣಾ ಕಾಯ್ದೆ- 2001ರ ಅನ್ವಯ ಇಂಧನ ಕ್ಷೇತ್ರದಲ್ಲಿ ಸುಸ್ಥಿರ ಅಭಿವೃದ್ಧಿಯ ಗುರಿ ಸಾಧನೆಗೆ ಶ್ರಮಿಸಲಾಗುವುದು" ಎಂದು ಇಂಧನ ಮತ್ತು ಮೂಲ ಸೌಕರ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಹೇಳಿದ್ದಾರೆ.

ಪ್ರಶಸ್ತಿ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ, "ಒಳ್ಳೆಯ ಕೆಲಸ ಮಾಡಿದಾಗ ಅದನ್ನು ಗುರುತಿಸಿ ನೀಡುವ ಪ್ರಶಸ್ತಿ ಮತ್ತಷ್ಟು ಕೆಲಸ ಮಾಡುವ ಪ್ರೇರಣೆ ತುಂಬುತ್ತದೆ. ಇಂಧನ ಸಂರಕ್ಷಣೆ ಮತ್ತು ದಕ್ಷತೆಯಲ್ಲಿ (ಇಸಿ ಮತ್ತು ಇಇ) ರಾಜ್ಯ ಮುಂಚೂಣಿಯಲ್ಲಿದೆ. 5 ವರ್ಷಗಳ ಅವಧಿಯಲ್ಲಿ 5 ಪ್ರಮುಖ ವಲಯಗಳಲ್ಲಿ ಸುಮಾರು 744 ಮಿಲಿಯನ್ ಯೂನಿಟ್ ಇಂಧನ ಉಳಿತಾಯ ಗುರಿ ಸಾಧಿಸಲು ಸರ್ಕಾರ ಮತ್ತು ಖಾಸಗಿಯವರೊಂದಿಗೆ ಕೆಲಸ ಮಾಡಿದ್ದೇವೆ" ಎಂದು ತಿಳಿಸಿದ್ದಾರೆ.

ಕರ್ನಾಟಕವು ಸತತ ಮೂರು ವರ್ಷಗಳಿಂದ, ಅಂದರೆ ಎಸ್.ಇ.ಇ.ಐ 2020 ಮತ್ತು ಎಸ್.ಇ.ಇ.ಐ 2021-2022, 2023ರ ಅವಧಿಯಲ್ಲಿ 'ಫ್ರಂಟ್ ರನ್ನರ್' ಎಂಬ ಮನ್ನಣೆಗೆ ಪಾತ್ರವಾಗಿದೆ. ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ, ರಾಜ್ಯ ಇಂಧನ ದಕ್ಷತೆ ಸೂಚ್ಯಂಕ (ಎಸ್.ಇ.ಇ.ಐ) 2023ರ ಪ್ರಶಸ್ತಿಯನ್ನು ಘೋಷಿಸಿದ್ದು, ಕರ್ನಾಟಕವು 85.75 ಅತ್ಯಧಿಕ ಅಂಕಗಳನ್ನು ಗಳಿಸುವ ಮೂಲಕ ದೇಶದಲ್ಲೇ ಉತ್ತಮ ಕಾರ್ಯನಿರ್ವಹಣೆಯ ರಾಜ್ಯ ಎಂಬ ಸ್ಥಾನ ಪಡೆದಿದೆ

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News