ನ್ಯಾಯಾಂಗ ದಮನ ಮಾಡಿದ ನಾಯಕರಿಂದ ‘ನ್ಯಾಯ ಯಾತ್ರೆ’: ಆರ್.ಅಶೋಕ್ ವ್ಯಂಗ್ಯ

Update: 2024-01-14 12:16 GMT

ಬೆಂಗಳೂರು: ‘ದೇಶದಲ್ಲಿ ನ್ಯಾಯಾಂಗವನ್ನು ದಮನ ಮಾಡಿದ ಕಾಂಗ್ರೆಸ್ ನಾಯಕರು ಈಗ ನ್ಯಾಯ ಯಾತ್ರೆ ಮಾಡುತ್ತಿರುವುದು ಢೋಂಗಿತನ. ತುರ್ತು ಪರಿಸ್ಥಿತಿ ಹೇರಿಕೆಯಿಂದ ಪ್ರಜಾಪ್ರಭುತ್ವವನ್ನು ದಮನ ಮಾಡಿದ ಇವರ ಯಾತ್ರೆಗೆ ಮೂರು ಕಾಸಿನ ಬೆಲೆ ಇಲ್ಲ’ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ

ರವಿವಾರ ಪ್ರಧಾನಿ ಮೋದಿ ಕರೆ ಹಿನ್ನೆಲೆಯಲ್ಲಿ ಜಯನಗರ 4ನೇ ಹಂತದ ಗಣೇಶ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ದಕ್ಷಿಣ ಭಾಗದಿಂದ ಜೋಡೋ ಯಾತ್ರೆ ಶುರು ಮಾಡಿದ್ದರು. ನಂತರ ಉತ್ತರ ಭಾಗದ ಮೂರು ರಾಜ್ಯಗಳಲ್ಲಿ ಚುನಾವಣೆಯಲ್ಲಿ ಸೋತರು. ರಾಹುಲ್ ಗಾಂಧಿ ಎಲ್ಲೆಲ್ಲಿ ಪಾದಯಾತ್ರೆ ಮಾಡಿ ನೆಲವನ್ನು ಸ್ಪರ್ಶಿಸುತ್ತಾರೋ ಅಲ್ಲೆಲ್ಲ ಕಾಂಗ್ರೆಸ್ ಅವನತಿ ಕಾಣುತ್ತದೆ’ ಎಂದು ಹೇಳಿದರು.

‘ಈಗ ನ್ಯಾಯ ಯಾತ್ರೆಯನ್ನು ಮಾಡುತ್ತಿರುವ ಅವರು ಈ ಹಿಂದೆ ಸರ್ವಾಧಿಕಾರದ ಆಡಳಿತವನ್ನು, ತುರ್ತು ಪರಿಸ್ಥಿತಿಯನ್ನು ದೇಶದಲ್ಲಿ ತಂದಿದ್ದರು. ನ್ಯಾಯಾಂಗವನ್ನು, ಪತ್ರಿಕಾ ರಂಗವನ್ನು ದಮನ ಮಾಡಿದ ಇದೇ ಕಾಂಗ್ರೆಸ್ ನಾಯಕರಿಗೆ ನ್ಯಾಯ ಕೇಳಲು ಯಾವ ನೈತಿಕತೆ ಇದೆ ಎಂದು ಅವರು ಪ್ರಶ್ನೆ ಮಾಡಿದರು.

‘ನ್ಯಾಯ ಯಾತ್ರೆ ವಾಸ್ತವದಲ್ಲಿ ಢೋಂಗಿ ಯಾತ್ರೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಎನ್ನುವಂತಾಗಿದೆ. ಪ್ರಜಾಪ್ರಭುತ್ವವನ್ನು ದಮನ ಮಾಡಿ, ಸಂಪತ್ತನ್ನು ಲೂಟಿ ಮಾಡಿದ ಇವರು ನ್ಯಾಯ ಕೇಳಲು ಹೋಗುವುದಕ್ಕೆ ಮೂರು ಕಾಸಿನ ಬೆಲೆ ಇಲ್ಲ. ಲೋಕಸಭಾ ಚುನಾವಣೆಯ ಪೂರ್ವ ಸಮೀಕ್ಷೆಯಲ್ಲಿ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂಬ ಭವಿಷ್ಯ ಕೇಳಿಬಂದಿದೆ. ಹೀಗಾಗಿ ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ಸಿಗರು ಯಾತ್ರೆ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಲಾಭ ಆಗುವುದಿಲ್ಲ ಎಂದು ಭವಿಷ್ಯ ನುಡಿದರು.

ಹಾನಗಲ್ ಅತ್ಯಾಚಾರ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅಲ್ಲಿನ ರಾಜಕೀಯ ನಾಯಕರು ಭೇಟಿಗೆ ಅವಕಾಶ ಮಾಡಿಕೊಡುತ್ತಿಲ್ಲ. ಪೊಲೀಸರ ಮೂಲಕ ಅವರನ್ನು ಬೇರೆ ಕಡೆ ಕಳುಹಿಸಲಾಗಿದೆ. ಈ ಪ್ರಕರಣವನ್ನು ಮುಚ್ಚಿಹಾಕುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ನೈತಿಕ ಪೊಲೀಸ್‍ಗಿರಿ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆಯೇ ಇಲ್ಲವಾಗಿದೆ ಎಂದು ಅವರು ದೂರಿದರು.

ನಮ್ಮ ಅಭ್ಯಂತರವಿಲ್ಲ: ‘ಮಾಜಿ ಸಚಿವ ವಿ.ಸೋಮಣ್ಣ ಅವರು ಪಕ್ಷದ ವರಿಷ್ಠರು ರಾಜ್ಯಸಭಾ ಟಿಕೆಟ್ ನೀಡುವುದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಹೈಕಮಾಂಡ್ ಅವರಿಗೆ ರಾಜ್ಯಸಭಾ ಟಿಕೆಟ್ ನೀಡಿದರೆ ಸ್ವಾಗತಿಸುತ್ತೇವೆ’

ಆರ್.ಅಶೋಕ್ ಪ್ರತಿಪಕ್ಷ ನಾಯಕ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News