ಕೇಂದ್ರದಲ್ಲಿ ಎನ್‍ಡಿಎಗೆ ಮತ್ತೆ ಅಧಿಕಾರ; ಮೋದಿ ಮತ್ತೊಮ್ಮೆ ಪ್ರಧಾನಿ: ಸಿ.ಟಿ.ರವಿ ವಿಶ್ವಾಸ

Update: 2023-09-16 09:32 GMT

ಬೆಂಗಳೂರು: ʼನೀತಿ, ನೇತೃತ್ವಹೀನ, ನಿಯತ್ತಿನ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಇರುವ ʼಇಂಡಿಯಾ,ʼ ಯಾವುದೇ ಹೆಸರಿನಲ್ಲಿ ಲೋಕಸಭಾ ಚುನಾವಣೆಗೆ ಇಳಿದರೂ ಕೂಡ ಬಿಜೆಪಿ 350ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಮತ್ತೆ ಎನ್‍ಡಿಎ ಅಧಿಕಾರಕ್ಕೆ ಬರುವುದು ನಿಶ್ಚಿತʼ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ತಿಳಿಸಿದ್ದಾರೆ. 

ಮಂಗಳೂರಿನಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದೇಶದ ಜನರು, ಸಂವಿಧಾನಕ್ಕೆ, ಇಡೀ ಭಾರತಕ್ಕೆ ನಮ್ಮ ನಿಯತ್ತು ಎಂದು ನಾವು ಸಾಬೀತುಪಡಿಸಿದ್ದೇವೆ. ಇದಕ್ಕೆ ತದ್ವಿರುದ್ಧವಾಗಿ ಕಾಂಗ್ರೆಸ್ ನೇತೃತ್ವದ ಒಕ್ಕೂಟ ʼಇಂಡಿಯಾʼ ನಡೆದುಕೊಳ್ಳುತ್ತಿದೆ ಎಂದು ಆಕ್ಷೇಪಿಸಿದರು

ʼʼಅವರ ನೀತಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು ಚೀನಾದ ಜೊತೆಗಿನ ಕಾಂಗ್ರೆಸ್ ಒಡಂಬಡಿಕೆ ಹಲವು ಅನುಮಾನಗಳನ್ನು ಸೃಷ್ಟಿ ಮಾಡಿದೆ. ಪ್ರತಿ ಬಾರಿ ವಿದೇಶಕ್ಕೆ ಹೋಗಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಮಾತನಾಡುವ ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂಧಿಯವರ ನಿಯತ್ತು ಒಂದು ಪ್ರಶ್ನಾರ್ಥಕ ಚಿಹ್ನೆ ಹುಟ್ಟು ಹಾಕುವಂತಿದೆ ʼʼಎಂದು ತಿಳಿಸಿದರು.

ವಂಶಪಾರಂಪರ್ಯ ಆಡಳಿತವನ್ನು ಸಮರ್ಥಿಸುವ ಪಕ್ಷಗಳು ಐಎನ್‍ಡಿಐಎ ಹೆಸರಿನಲ್ಲಿ ಒಗ್ಗೂಡಿವೆ. ಭಯೋತ್ಪಾದಕರಲ್ಲೂ ಮತಬ್ಯಾಂಕ್ ನೋಡುವುದು ಅವರ ನೀತಿ. ಕೋಮುವಾದಿ ಶಕ್ತಿಗಳ ಜೊತೆ ರಾಜಕೀಯ ಹೊಂದಾಣಿಕೆ ಅವರ ನೀತಿ. ಭಾರತ ಮತ್ತು ಭಾರತೀಯ ಸಂಸ್ಕೃತಿ ಬಗ್ಗೆ ಅವಹೇಳನ ಅವರ ನೀತಿ. ಸನಾತನ ಧರ್ಮದ ಬಗ್ಗೆ ಅವಹೇಳನ ಮಾತ್ರವಲ್ಲ; ಅದನ್ನು ಬೇರುಸಹಿತ ಕಿತ್ತುಹಾಕುತ್ತೇವೆ ಎಂಬುದು ಅವರ ನೀತಿ. ಭ್ರಷ್ಟಾಚಾರದಿಂದಲೇ ಕೂಡಿರುವುದು ಅವರ ನೀತಿ. ʼಇಂಡಿಯಾʼ ನೇತೃತ್ವ ಅದೊಂದು ಪ್ರಶ್ನಾರ್ಥಕ ಚಿಹ್ನೆಯಾಗಿದೆʼʼ ಎಂದು ಟೀಕಿಸಿದರು.

ʼನಾಯಕ ಯಾರೆಂಬ ಬಗ್ಗೆ ಅವರಲ್ಲಿ ಸ್ಪಷ್ಟತೆ ಇಲ್ಲ. ಬಹುಶಃ ಸಂಗೀತ ಕುರ್ಚಿ (ಮ್ಯೂಸಿಕಲ್ ಚೇರ್) ಮೂಲಕ ಅವರು ʼನಾಯಕನನ್ನು ಆಯ್ಕೆ ಮಾಡುವ ಲಕ್ಷಣಗಳು ಕಾಣುತ್ತಿವೆ. ಸಮರ್ಥ ಮತ್ತು ಎಲ್ಲರೂ ಒಪ್ಪಬಹುದಾದ ನಾಯಕ ಅವರಿಗೆ ಇಲ್ಲದ ಕಾರಣ ಮ್ಯೂಸಿಕಲ್ ಚೇರ್ ಮೂಲಕ ಯಾರಿಗೆ ಕುರ್ಚಿ ಒಲಿಯುತ್ತೋ ಅವರನ್ನು ನೇತಾರರಾಗಿ ಮಾಡಿಕೊಳ್ಳುವ ದುಸ್ಥಿತಿ ಅವರದು. ನಿಯತ್ತಿನ ಪ್ರಶ್ನೆ ಬಂದಾಗ ಯಾರಿಗೆ ಅವರ ನಿಯತ್ತು ಎಂಬುದು ಅನುಮಾನ ಹುಟ್ಟಿಸುತ್ತದೆʼʼ ಎಂದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News