ಸಹಕಾರ ಸಂಘಗಳ ಸಾಲ ಮನ್ನಾಕ್ಕೆ ಅಗತ್ಯ ಕ್ರಮ: ಸಚಿವ ಕೆ.ಎನ್. ರಾಜಣ್ಣ

Update: 2024-07-16 17:51 GMT

ಬೆಂಗಳೂರು: 2018ನೆ ಸಾಲಿನ 1 ಲಕ್ಷ ರೂ. ಸಾಲ ಮನ್ನಾ ಯೋಜನೆಯಡಿ 6,048 ರೈತರಿಗೆ 14.45 ಕೋಟಿ ರೂ.ಗಳ ಸಾಲ ಮನ್ನಾ ಮೊತ್ತದ ಬಿಡುಗಡೆ ಬಾಕಿ ಇದ್ದು ಈ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

ಮಂಗಳವಾರ ಪರಿಷತ್ತಿನ ಅಧಿವೇಶನದ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಎಸ್. ರವಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಡಿ.ಸಿ.ಸಿ. ಬ್ಯಾಂಕುಗಳ ಮೂಲಕ ಸಾಲ ನೀಡುವ ಸಹಕಾರ ಸಂಘಗಳಲ್ಲಿ 86,305 ರೈತ ಸದಸ್ಯರಿಗೆ 359.52 ಕೋಟಿ ರೂ.ಗಳ ಸಾಲ ಮನ್ನಾ ಮಾಡಲು ಅರ್ಹತೆಯನ್ನು ಗುರುತಿಸಿ ಹಸಿರು ಪಟ್ಟಿ ತಯಾರಿಸಲಾಗಿದೆ. ಈ ಪೈಕಿ 2018-19, 2019-20 ಮತ್ತು 2020-21ರಲ್ಲಿ 80,257 ರೈತರ 345.08 ಕೋಟಿ ರೂ.ಗಳ ಸಾಲ ಮನ್ನಾ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

2017ನೆ ಸಾಲಿನ 50 ಸಾವಿರ ರೂ.ಗಳ ಸಾಲ ಮನ್ನಾ ಯೋಜನೆಯಡಿ ರಾಮನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಡಿ.ಸಿ.ಸಿ. ಬ್ಯಾಂಕ್ ಮೂಲಕ ಸಾಲ ನೀಡುವ ಸಹಕಾರ ಸಂಘಗಳ 86,703 ರೈತ ಸದಸ್ಯರಿಗೆ 360.86 ಕೋಟಿಗಳ ಸಾಲ ಮನ್ನಾ ಕ್ಲೇಂ ಮಾಡಲಾಗಿದೆ. 2023-24ನೆ ಸಾಲಿನಲ್ಲಿ ಮಾ.28ರಂದು 3,804 ರೈತರಿಗೆ 15.79 ಕೋಟಿ ರೂ.ಗಳ ಸಾಲ ಮನ್ನಾ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಹಾಲು ಉತ್ಪಾದಕರ ಸಂಘಗಳ ಪ್ರೋತ್ಸಾಹಕ್ಕೆ ಅಗತ್ಯ ಕ್ರಮ:

ಹಾಲು ಉತ್ಪಾದಕರ ಸಂಘಗಳ ಪ್ರೋತ್ಸಾಹಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

ಬಿಜೆಪಿ ಸದಸ್ಯ ಹಣಮಂತ್ ನಿರಾಣಿ ಕೇಳಿದ ಪ್ರಶ್ನೆಗೆ ಗುರುತಿನ ಪ್ರಶ್ನಗೆ ಉತ್ತರಿಸಿದ ಅವರು, ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ತಿಂಗಳು 15 ರೂ.ಗಳ ಪ್ರೋತ್ಸಾಹ ಧನ ಪಾವತಿಗೆ ಸಂಬಂಧಿಸಿದಂತೆ ಕ್ರೋಢೀಕೃತ ಮಾಹಿತಿಯನ್ನು ಪಡೆದು ಒಕ್ಕೂಟಗಳ ಇ ಸೈನ್ ಮಾಡಿ ಸರಕಾರಕ್ಕೆ ಸಲ್ಲಿಸಲಾಗುತ್ತದೆ. ಡಿಬಿಟಿ ಮುಖಾಂತರ ನೇರವಾಗಿ ಪಾವತಿಸಲಾಗುತ್ತಿದೆ ಎಂದರು.

ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ 3,06,826 ರೈತರಿಗೆ ಜೂನ್ 2024ರ ಅಂತ್ಯದವರೆಗೆ ಒಟ್ಟು ಪಾವತಿ ಮಾಡಲು ಬಾಕಿ ಇರುವ ಪ್ರೋತ್ಸಾಹಧನದ ಮೊತ್ತ 31.93 ಕೋಟಿ ರೂ.ಗಳನ್ನು ತಾಂತ್ರಿಕ ಅಡಚಣೆ ಹಾಗೂ ಅನುದಾನದ ಕೊರತೆಯಿಂದ ಬಾಕಿ ಉಳಿದಿದೆ. ಪ್ರೋತ್ಸಾಹಧನ ಪಾವತಿಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.

35.10 ಲಕ್ಷ ರೈತರಿಗೆ ಕೃಷಿ ಸಾಲ ವಿತರಿಸಲು ಗುರಿ

2024-25ನೆ ಸಾಲಿಗೆ 35.10 ಲಕ್ಷ ರೈತರಿಗೆ 25 ಸಾವಿರ ಕೋಟಿ ರೂ.ಗಳ ಅಲ್ಪಾವಧಿ ಕೃಷಿ ಸಾಲ ಮತ್ತು 0.90 ಲಕ್ಷ ರೈತರಿಗೆ 2 ಸಾವಿರ ಕೋಟಿ ರೂ.ಗಳ ಮಧ್ಯಮಾವಧಿ ಹಾಗೂ ಧೀರ್ಘಾವಧಿ ಕೃಷಿ ಸಾಲ ವಿತರಿಸುವ ಗುರಿ ನಿಗದಿಪಡಿಸಿದ್ದು, 2566.02 ಕೋಟಿ ರೂ.ಗಳ ಹೆಚ್ಚಿನ ಕೃಷಿ ಸಾಲ ವಿತರಿಸಲಾಗುವುದು ಎಂದು ಸಹಾಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

ಕಾಂಗ್ರೆಸ್‍ನ ಸದಸ್ಯ ದಿನೇಶ್ ಗೂಳಿಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಾಥಮಿಕ ಪತ್ತಿನ ಸಹಕಾರ ಸಂಘ/ಡಿ.ಸಿ.ಸಿ ಬ್ಯಾಂಕುಗಳ ಮೂಲಕ 2023-24ನೆ ಸಾಲಿನಲ್ಲಿ 29,26,910 ರೈತರಿಗೆ 22,982.10 ಕೋಟಿ ರೂ.ಗಳ ಬೆಳೆ ಸಾಲ ವಿತರಿಸಲಾಗಿದೆ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ/ ಡಿ.ಸಿ.ಸಿ ಬ್ಯಾಂಕುಗಳ ಮೂಲಕ 2024-25ನೆ ಸಾಲಿನಲ್ಲಿ 35.10 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 25 ಸಾವಿರ ಕೋಟಿ ರೂ.ಗಳ ಅಲ್ಪಾವಧಿ ಕೃಷಿ ಸಾಲ ಮತ್ತು ಪಶುಸಂಗೋಪನೆಗೆ ದುಡಿಯುವ ಬಂಡವಾಳ ಸಾಲ ವಿತರಿಸಲು ಗುರಿ ಹೊಂದಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ/ಡಿ.ಸಿ.ಸಿ ಬ್ಯಾಂಕುಗಳ ಮೂಲಕ 2024ನೆ ಜು.6ರವರೆಗೆ 7,80,363 ರೈತರಿಗೆ 6799.17 ಕೋಟಿ ರೂ. ಗಳ ಬೆಳೆ ಸಾಲ ವಿತರಿಸಲಾಗಿದೆ. ಮೂರು ವರ್ಷಗಳಲ್ಲಿ ಸಾಲ ವಿತರಿಸಿದ ಮಾಹಿತಿ, ಡಿ.ಸಿ.ಸಿ ಬ್ಯಾಂಕುಗಳಲ್ಲಿರುವ ಬಂಡವಾಳ ಮತ್ತು ನಬಾರ್ಡ್‍ನ ಪುನರ್ಧನ ಆಧರಿಸಿ ಪ್ರತಿ ಜಿಲ್ಲೆಗೆ ಸರಾಸರಿ 1.13 ಲಕ್ಷ ರೈತರಿಗೆ 806 ಕೋಟಿ ರೂ.ಗಳ ಅಲ್ಪಾವಧಿ ಕೃಷಿ ಸಾಲ ವಿತರಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News