ನವಜಾತ ಶಿಶು ಮಾರಾಟ ಪ್ರಕರಣ: ಏಳು ಮಂದಿ ಆರೋಪಿಗಳ ಬಂಧನ
ಬೆಂಗಳೂರು: ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ನವಜಾತ ಶಿಶು ಮಾರಾಟ ಮಾಡುತ್ತಿದ್ದ ಪ್ರಕರಣ ಸಂಬಂಧ ಏಳು ಮಂದಿ ಆರೋಪಿಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.
ಆರ್.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನ.18ರಂದು ಮಗು ಮಾರಾಟಕ್ಕೆ ಯತ್ನಿಸಿರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಸಿಸಿಬಿ ವಿಭಾಗದ ಅಧಿಕಾರಿಗಳು, ಆರೋಪಿಗಳಾದ ಕಣ್ಣನ್ ರಾಮಸ್ವಾಮಿ, ಹೇಮಲತಾ, ಮಹಾಲಕ್ಷ್ಮಿ, ಶರಣ್ಯ, ಸಹಾಸಿನಿ, ರಾಧಾ ಹಾಗೂ ಗೋಮತಿ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಗೊತ್ತಾಗಿದೆ.
ಬಂಧಿತ ಆರೋಪಿಗಳು, ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಲು ಇಷ್ಟವಿಲ್ಲದವರ ಬಳಿ ಹಣದ ಆಮಿಷವೊಡ್ಡಿ, ಅವರ ಮಗುವನ್ನು ಮಾರಾಟ ಮಾಡಿಕೊಡುತ್ತೇವೆ ಎಂದು ಹೇಳಿ ಹೆರಿಗೆಯ ಬಳಿಕ ನವಜಾತ ಶಿಶುಗಳನ್ನು ತಮಿಳುನಾಡಿನಿಂದ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದರು. ಆರೋಪಿಗಳು ಗರ್ಭಿಣಿಯರಿಗೆ ಮಾತ್ರವಲ್ಲದೆ, ಯುವತಿಯರಿಗೂ ಬಾಡಿಗೆ ತಾಯ್ತನದ ಮೂಲಕ ಮಗುವಿಗೆ ಜನ್ಮ ನೀಡಿ, ಮಗು ಮಾರಾಟ ಮಾಡಿ ಹಣ ಮಾಡಬಹುದು ಎಂದೂ ಆಮಿಷವೊಡ್ಡುತ್ತಿದ್ದರು.
ಬೆಂಗಳೂರಿನಲ್ಲಿ ಮಕ್ಕಳನ್ನು ಖರೀದಿಸುವವರಿಂದ 8ರಿಂದ 10ಲಕ್ಷ ರೂ. ಹಣ ಪಡೆದು, ನಕಲಿ ದಾಖಲೆಗಳನ್ನು ನೀಡಿ ಮಾರಾಟ ಮಾಡುತ್ತಿದ್ದರು. ಆರ್.ಆರ್.ನಗರದಲ್ಲಿ 20ದಿನದ ಗಂಡು ಮಗುವನ್ನು ಮಾರಾಟ ಮಾಡುತ್ತಿದ್ದಾಗ, ಮಗುವಿನ ತಾಯಿಯು ಜೊತೆಯಲ್ಲೇ ಇದ್ದಳು. ಆರೋಪಿಗಳು ಈ ಹಿಂದೆಯೂ ಸಹ ಇದೇ ರೀತಿ ಮಕ್ಕಳ ಮಾರಾಟ ಮಾಡಿರುವ ಕುರಿತು ಮಾಹಿತಿ ಇದ್ದು, ಸದ್ಯ ಆರೋಪಿಗಳನ್ನು ಹೆಚ್ಚಿನ ತನಿಖೆಗೊಳಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.