ಹುಕ್ಕಾ ಬಾರ್, ತಂಬಾಕು ಉತ್ಪನ್ನಗಳ ನಿಷೇಧಕ್ಕೆ ಮುಂದಾದ ರಾಜ್ಯ ಸರಕಾರ

Update: 2023-09-19 15:07 GMT

Photo: X/@dineshgrao

ಬೆಂಗಳೂರು, ಸೆ.19: ಹುಕ್ಕಾ ಬಾರ್ ಸೇರಿದಂತೆ ರಾಜ್ಯದಲ್ಲಿ ತಂಬಾಕು ಉತ್ಪನ್ನಗಳನ್ನು ನಿಷೇಧಿಸಲು ರಾಜ್ಯ ಸರಕಾರ ಮುಂದಾಗಿದ್ದು, ಈ ಸಂಬಂಧ ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತರುವುದರ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಂಗಳವಾರ ವಿಕಾಸ ಸೌಧದಲ್ಲಿ ಕ್ರೀಡಾ ಸಚಿವ ನಾಗೇಂದ್ರ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವೆನೆಯನ್ನು ಶಾಲೆಗಳ ಜೊತೆಗೆ, ದೇವಸ್ಥಾನಗಳು, ಆಸ್ಪತ್ರೆಗಳ ಸುತ್ತ ಮುತ್ತಲು ನಿಷೇಧಿಸುವುದಾಗಿ, ಜತೆಗೆ, ಕಟ್ಟುನಿಟ್ಟಿನ ಕ್ರಮಕ್ಕಾಗಿ ಕೋಟ್ಪಾ ಕಾಯ್ದೆಗೆ ತಿದ್ದುಪಡಿಗೆ ಸೂಚಿಸಲಾಗಿದೆ ಎಂದರು.

ಹಿಂದಿನ ಕೋಟ್ಪಾ ಕಾಯ್ದೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆಯನ್ನು ನಿಷೇಧಿಸಲಾಗಿತ್ತು. ಆದರೆ, ಸಿಗರೇಟ್ ಜೊತೆಗೆ ಇತರ ತಂಬಾಕು ಉತ್ಪನ್ನಗಳ ಸೇವನೆ ಮತ್ತು ಮಾರಾಟವನ್ನು ನಿಷೇಧಿಸುವ ನಿಟ್ಟಿನಲ್ಲಿ ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ ಎಂದ ಅವರು, ಹುಕ್ಕಾಬಾರ್‍ ಗಳಿಗೆ ಯುವಕರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರಿಂದ ಯುವಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಹುಕ್ಕಾಬಾರ್ ಗಳಲ್ಲಿ ಮಾದಕ ವಸ್ತುಗಳ ಸೇವನೆಯನ್ನ ನಿಷೇಧಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಹುಕ್ಕಾ ಬಾರ್ ಗಳಿಗೆ ನಿಯಂತ್ರಣ ಹೇರುವಲ್ಲಿ ಕ್ರೀಡಾ ಸಚಿವ ನಾಗೇಂದ್ರ ಅವರು ಕೆಲವು ಸಲಹೆ ನೀಡಿದ್ದು, ಕೋಟ್ಪಾ ಕಾಯ್ಸೆ ತಿದ್ದುಪಡಿಯಲ್ಲಿ ಹುಕ್ಕಾ ಬಾರ್ ಗಳಲ್ಲಿ ನಡೆಯುವ ಮಾದಕ ವಸ್ತುಗಳ ಸೇವನೆಗೆ ನಿಷೇಧ ಹೇರಲು ಕ್ರಮ ಕೈಗೊಳ್ಳುವುದಾಗಿ ದಿನೇಶ್ ಗುಂಡೂರಾವ್ ಹೇಳಿದರು.

ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತಂದಲ್ಲಿ 21 ವರ್ಷದ ಒಳಗಿನವರಿಗೆ ತಂಬಾಕು ಉತ್ಪನ್ನಗಳ ಖರೀದಿಗೆ ನಿಷೇಧ ಇರಲಿದೆ. ಜತೆಗೆ, ಯಾವುದೇ ಶಾಲೆ, ಕಾಲೇಜು, ಆಸ್ಪತ್ರೆ, ಶಿಶುಪಾಲನಾ ಕೇಂದ್ರಗಳು, ಹೆಲ್ತ್ ಕೇರ್ ಸೆಂಟರ್, ದೇವಸ್ಥಾನಗಳು, ಮಂದಿರಿಗಳು, ಮಸೀದಿಗಳು, ಉದ್ಯಾನವನ ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತುಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News