ಚಿಕ್ಕಮಗಳೂರು: ತಾಯಿಯನ್ನೇ ಹತ್ಯೆ ಮಾಡಿದ ಪುತ್ರ

Update: 2023-10-01 11:44 GMT

 ಘಟನಾ ಸ್ಥಳದಲ್ಲಿ ಎಸ್ಪಿ ಡಾ.ವಿಕ್ರಮ್ ಆಮ್ಟೆ ಪರಿಶೀಲನೆ ನಡೆಸುತ್ತಿರುವುದು

ಚಿಕ್ಕಮಗಳೂರು, ಅ.1: ಮಗನೇ ತಾಯಿಯನ್ನು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ವರದಿಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪಂಚನಹಳ್ಳಿ ಗ್ರಾಮದ ಕಲ್ಲೇಶಪ್ಪ ಎಂಬವರ ಪತ್ನಿ ಕಮಲಮ್ಮ(50) ಮಗನಿಂದಲೇ ಹತ್ಯೆಯಾದ ಮಹಿಳೆಯಾಗಿದ್ದು, ಕಲ್ಲೇಶಪ್ಪ, ಕಮಲಮ್ಮ ದಂಪತಿ ಮಗ ಸಂತೋಷ್(30) ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ. 

ಕಳೆದ ಶನಿವಾರ ರಾತ್ರಿ ಸಂತೋಷ್ ಕುಡಿದು ಮನೆಗೆ ಬಂದಿದ್ದು, ಇದನ್ನು ಪ್ರಶ್ನಿಸಿದ ತಾಯಿ ಕಮಲಮ್ಮ ಅವರೊಂದಿಗೆ ವಾಗ್ವಾದ ನಡೆಸಿ ಜಗಳವಾಡಿದ್ದಾನೆ. ತಾಯಿ, ಮಗನ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದ ವೇಳೆ ಕುಪಿತನಾದ ಸಂತೋಷ್ ದೊಣ್ಣೆಯೊಂದರಿಂದ ಕಮಲಮ್ಮ ಅವರ ತಲೆಗೆ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಕಮಲಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದ್ದು, ಘಟನೆಯ ಸುದ್ದಿ ತಿಳಿದ ಕಡೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹತ್ಯೆ ಮಾಡಿದ ಆರೋಪಿ ಸಂತೋಷ್‍ನನ್ನು ಬಂಧಿಸಿದ್ದಾರೆ.

ಸ್ಥಳಕ್ಕೆ ವಿಧಿ ವಿಜ್ಞಾನ ಹಾಗೂ ಎಫ್‍ಎಸ್‍ಎಲ್ ತಜ್ಞರ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ರವಿವಾರ ಬೆಳಗ್ಗೆ ಸ್ಥಳಕ್ಕೆ ಎಸ್ಪಿ ಡಾ.ವಿಕ್ರಮ್ ಆಮ್ಟೆ ಭೇಟಿ ನೀಡಿ ಪರಿಶೀಲಿಸಿದರು.

 

 

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News