ಒಂದು ಧರ್ಮ, ಒಂದು ಜಾತಿಯ ಪರವಾಗಿರಲು ನಾವು ಬಿಜೆಪಿ ಅಲ್ಲ: ಸಿದ್ದರಾಮಯ್ಯ

Update: 2024-01-13 11:40 GMT

ಸಿಎಂ ಸಿದ್ದರಾಮಯ್ಯ 

ರಾಯಚೂರು, ಜ.13: ಕಾಂಗ್ರೆಸ್ ಪಕ್ಷ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿದ್ದು, ಒಂದು ಧರ್ಮ, ಒಂದು ಜಾತಿಯ ಪರವಾಗಿರಲು ನಾವು ಬಿಜೆಪಿ ಅಲ್ಲ. ನಾವು ಎಲ್ಲಾ ಧರ್ಮ, ಎಲ್ಲಾ ಜಾತಿಯವರ ಪರವಾಗಿ ಇರುವವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ದೇವದುರ್ಗದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಸಮಾಜ ವಿಭಜನಾ ಹೇಳಿಕೆಗೆ ಉತ್ತರಿಸಿ, ಸಮಾಜದಲ್ಲಿನ ಎಲ್ಲಾ ಜಾತಿ, ಧರ್ಮದ ಪರವಾಗಿ ನಾವಿದ್ದೇವೆ. ಕೇವಲ ಒಂದು ಜಾತಿ, ಧರ್ಮದ ಪರವಾಗಿರಲು ನಾವು ಬಿಜೆಪಿ ಅಲ್ಲ. ಧರ್ಮದ ಆಧಾರದ ಮೇಲೆ ಸಮಾಜವನ್ನು ಒಡೆಯುವವರಲ್ಲ. ನಾವು ಜಾತ್ಯತೀತ ತತ್ವ ಹಾಗೂ ಧರ್ಮನಿರಪೇಕ್ಷತೆಯಲ್ಲಿ ನಂಬಿಕೆಯುಳ್ಳವರು. ಕಾಂಗ್ರೆಸ್ ಜಾತ್ಯತೀತ ಪಕ್ಷ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ನಮ್ಮದು ಎಂದರು.

ಮೈಸೂರು ಲೋಕಸಭಾ ಕ್ಷೇತ್ರದಿಂದ ಯತೀಂದ್ರ ಸ್ಪರ್ಧೆ: ಊಹಾಪೋಹ

ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಮಾಜಿ ಶಾಸಕ ಯತೀಂದ್ರರನ್ನು ಕಣಕ್ಕಿಳಿಸಿದರೆ ಸ್ವಾಗತಿಸುವುದಾಗಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ, ನಾನಾಗಲಿ, ಯತೀಂದ್ರ ಆಗಲಿ ಈ ರೀತಿ ಹೇಳಿಲ್ಲ. ಪ್ರತಾಪ್ ಸಿಂಹರಿಗೆ ಸೋಲಿನ ಭಯ ಶುರುವಾಗಿದೆ. ಹಾಗಾಗಿ ಏನೇನೋ ಹೇಳಿಕೆ ನೀಡುತ್ತಾರೆ. ಸುಮ್ಮನೆ ಊಹಾಪೋಹಗಳು ಅಷ್ಟೇ ಎಂದರು.

ವರದಿ ಸಲ್ಲಿಕೆಯ ನಂತರ ತೀರ್ಮಾನ

ನಗರಾಭಿವೃದ್ಧಿ ಸಚಿವ ಚುನಾವಣಾ ವೀಕ್ಷಕರಾಗಿ ಹೋಗಿದ್ದರು. ಅವರು ನೀಡಿರುವ ವರದಿ ಆಧಾರದ ಮೇಲೆ ನಾವು ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಕ್ಷೇತ್ರದಲ್ಲಿ ಶಾಸಕರು, ಮಾಜಿ ಶಾಸಕರು, ಸಂಸದರು, ಅಭ್ಯರ್ಥಿಯಾಗಿದ್ದವರು, ಬ್ಲಾಕ್ ಸಮಿತಿ ಅಧ್ಯಕ್ಷ, ಜಿಲ್ಲಾಧ್ಯಕ್ಷರು, ಪ್ರಮುಖ ಕಾರ್ಯಕರ್ತರ ಅಭಿಪ್ರಾಯ ಪಡೆದು ಅವರು ಹೇಳಿದವರಿಗೆ ನೀಡಲಾಗುವುದು ಎಂದರು.

ಅಯೋಧ್ಯೆಗೆ ಹೋಗುತ್ತೇನೆ ಅಥವಾ ಹೋಗುವುದಿಲ್ಲ ಎಂದು ಹೇಳಿಲ್ಲ

ರಾಮಮಂದಿರ ಉದ್ಘಾಟನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯರ ನಿಲುವಿಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಯೋಧ್ಯೆಗೆ 22ರ ನಂತರ ತೆರಳುವುದಾಗಿ ಹೇಳಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಹೋಗಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರನ ಪ್ರತಿಮೆ ಸ್ಥಾಪನೆಗೆ ನಮ್ಮದೇನೂ ವಿರೋಧವಿಲ್ಲ. ಆದರೆ ರಾಜಕೀಯ ಮಾಡಬಾರದು. 22ರಂದು ರಾಜಕೀಯವಾಗಿ ಉದ್ಘಾಟನಾ ಸಭೆಯನ್ನು ಬಳಸಲು ಹೊರಟಿದ್ದಾರೆ. ಅದನ್ನು ನಾವು ವಿರೋಧಿಸುತ್ತೇವೆಯೇ ಹೊರತು ಶ್ರೀ ರಾಮಚಂದ್ರನ ವಿರೋಧಿಗಳಲ್ಲ. ನಾನು ಎಲ್ಲಿಯೂ ಅಯೋಧ್ಯೆಗೆ ಹೋಗುತ್ತೇನೆ ಅಥವಾ ಹೋಗುವುದಿಲ್ಲ ಎಂದು ಹೇಳಿಲ್ಲ ಎಂದರು.

ನೂರು ರೂ.ಗಳನ್ನಾದರೂ ಕೊಟ್ಟಿದ್ದರೆ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಗೃಹ ಲಕ್ಷ್ಮೀ ಯೋಜನೆಯಡಿ ಕೊಡುವ 2000 ರೂ.ಯಾವುದಕ್ಕೂ ಸಾಲುವುದಿಲ್ಲ ಎಂದಿರುವ ಬಗ್ಗೆ ಮಾತನಾಡಿ ಅವರು ನೂರು ರೂ.ಗಳನ್ನಾದರೂ ಕೊಟ್ಟಿದ್ದರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News