'ಗ್ಯಾರಂಟಿ'ಗಳು ತಮ್ಮದೆಂದು ಬಿಂಬಿಸಲು ಹೆಣಗಾಡುತ್ತಿರುವುದು ವಿಪರ್ಯಾಸ: ಕೇಂದ್ರದ ವಿರುದ್ಧ ಬಜೆಟ್ ನಲ್ಲಿ ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರು, ಫೆ. 16: ಗ್ಯಾರಂಟಿಗಳನ್ನು ಬಿಟ್ಟಿ ಭಾಗ್ಯಗಳೆಂದು ಬಣ್ಣಿಸಿ ರಾಜ್ಯ ದಿವಾಳಿಯಾಗಿದೆ, ಬೊಕ್ಕಸದಲ್ಲಿ ಹಣವಿಲ್ಲ ಎಂದು ಸುಳ್ಳು ಸುದ್ದಿ ಹರಡಿ ನಮ್ಮ ಸ್ಥೈರ್ಯ ಕುಗ್ಗಿಸಿದವರೇ ಇಂದು ನಮ್ಮ ಗ್ಯಾರಂಟಿಗಳನ್ನು ಕದ್ದು ಅವರ ಗ್ಯಾರಂಟಿಗಳೆಂದು ನಂಬಿಸಲು ಹಣಗಾಡುತ್ತಿರುವುದು ವಿಪರ್ಯಾಸ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಆಯವ್ಯಯ ಮಂಡನೆ ಮಾಡಿದ ಅವರು, ಇಂತಹ ಟೀಕೆಗಳಿಗೆ ನಾನಲ್ಲ, ಶರಣರೇ ಉತ್ತರ ನೀಡಿದ್ದಾರೆ. 'ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಿಲ್ಲದೆ, ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ, ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು, ಮಾರಯ್ಯ ಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನ್ನಕ್ಕರ' ಎಂದು ಶರಣೆ ಆಯ್ದಕ್ಕಿ ಲಕ್ಕಮ್ಮನವರ ವಚನವನ್ನು ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ.
ಕೇಂದ್ರದ ವಿರುದ್ಧ ವಾಗ್ದಾಳಿ: ರಾಜ್ಯದ 223 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ರೈತರಿಗೆ ತುಸು ನೆಮ್ಮದಿ ನೀಡಲು ಎನ್.ಡಿ.ಆರ್.ಎಫ್. ನಿಧಿಯಿಂದ 18,171 ಕೋಟಿ ರೂ. ಬರ ಪರಿಹಾರ ಕೋರಿ ಕೇಂದ್ರಕ್ಕೆ ಮೂರು ಮನವಿಗಳನ್ನು ಸಲ್ಲಿಸಿದರೂ ಕೇಂದ್ರ ಸರಕಾರ ಯಾವುದೇ ರೀತಿಯ ಸ್ಪಂದನ ನೀಡಿಲ್ಲ ಎಂದು ಸಿದ್ದರಾಮಯ್ಯ ಬಜೆಟ್ನಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
15ನೆ ಹಣಕಾಸು ಆಯೋಗವು 2011-17ರ ಅವಧಿಯಲ್ಲಿನ ವೆಚ್ಚವನ್ನು ಆಧರಿಸಿ ಪರಿಹಾರ ಮೊತ್ತ ನಿಗದಿ ಮಾಡಿರುವುದರಿಂದ ರಾಜ್ಯಕ್ಕೆ 2021-26ರ ಅವಧಿಗೆ ನಿಗದಿಪಡಿಸಿರುವ ಎಸ್.ಡಿ.ಆರ್.ಎಫ್. ಮೊತ್ತ ಹಂಚಿಕೆ ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಅತ್ಯಂತ ನಿರಾಶಾದಾಯಕವಾಗಿದೆ. 2018ರಿಂದ ಪ್ರತಿ ಪ್ರತಿವರ್ಷವೂ ರಾಜ್ಯವು ಅನುಭವಿಸಿದ ತೀವ್ರ ನೈಸರ್ಗಿಕ ವಿಕೋಪಗಳಿಂದ ಅಂದಾಜು 1.21 ಲಕ್ಷ ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆಎಂದು ಸಿದ್ದರಾಮಯ್ಯ ಟೀಕಾ ಪ್ರಹಾರ ಮಾಡಿದ್ದಾರೆ.