ಬಿಜೆಪಿ ಸವಾಲುಗಳನ್ನು ಎದುರಿಸುವ ಸಂದರ್ಭದಲ್ಲೆಲ್ಲ 'ಪಾಕಿಸ್ತಾನ್ ಝಿಂದಾಬಾದ್' ಎನ್ನುವ ಶಬ್ದ ಸದ್ದು ಮಾಡುತ್ತದೆ: ಪ್ರಿಯಾಂಕ್ ಖರ್ಗೆ ಟೀಕೆ
ಬೆಂಗಳೂರು, ಫೆ.28: ದೇಶದಲ್ಲಿ ಬಿಜೆಪಿ ಸವಾಲುಗಳನ್ನು ಎದುರಿಸುವ ಸಂದರ್ಭ ಬಂದಾಗಲೆಲ್ಲ ಈ “ಪಾಕಿಸ್ತಾನ್ ಝಿಂದಾಬಾದ್”ಎನ್ನುವ ಶಬ್ದ ಸದ್ದು ಮಾಡುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಈ ಬಗ್ಗೆ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, ವಿಜಯೋತ್ಸವ ಆಚರಣೆಯ ವೇಳೆ ಅಲ್ಲಿ ಉಪಸ್ಥಿತರಿದ್ದ ಒಂದಷ್ಟು ಮಾಧ್ಯಮ ಸ್ನೇಹಿತರು ಅಲ್ಲಿ “ನಾಸಿರ್ ಸಾಬ್ ಝಿಂದಾಬಾದ್”ಎಂದು ಕೂಗಿರುವುದಾಗಿ ಹೇಳಿದ್ದಾರೆ. ಅಕಸ್ಮಾತ್ ಅಲ್ಲಿ “ಪಾಕಿಸ್ತಾನ್”ಎಂದೇ ಕೂಗಿದ್ದರೆ ಎಲ್ಲರಿಗೂ ಒಂದೇ ರೀತಿ ಕೇಳಿಸಿರಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಅಕಸ್ಮಾತ್ ಆತ ನಿಜಕ್ಕೂ ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಿದ್ದರೆ ಸಹಜವಾಗಿ ಪತ್ರಕರ್ತರ ಪ್ರಜ್ಞೆ ಜಾಗೃತವಾಗಿ ಆತನತ್ತ ಗಮನ ಹರಿಸುತ್ತಿದ್ದರು, ಆತನತ್ತ ಕ್ಯಾಮರಾ ತಿರುಗಿಸುತ್ತಿದ್ದರು, ಆತನ ಮೇಲೆ ಮುಗಿಬೀಳುತ್ತಿದ್ದರು, ಆದರೆ ಇಲ್ಲಿ ಪತ್ರಕರ್ತರು ಆತನತ್ತ ಕಿಂಚಿತ್ತೂ ಗಮನಿಸಿಲ್ಲ ಎಂದು ಹೇಳಿದ್ದಾರೆ.
ಆತ ಹಾಗೆ ಕೂಗಿದ್ದೇ ಆಗಿದ್ದರೆ ಅಲ್ಲಿ ನೆರೆದಿದ್ದವರು ಖಂಡಿತಾ ಸುಮ್ಮನಿರುತ್ತಿರಲಿಲ್ಲ, ಕೂಡಲೇ ಆ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಿದ್ದರು, ಪತ್ರಕರ್ತರೂ ಸೇರಿದಂತೆ ಅಲ್ಲಿ ನೆರೆದಿದ್ದವರ ಮ್ಯಾನರಿಸಂನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಅಕಸ್ಮಾತ್ ಆ ವ್ಯಕ್ತಿ ಹಾಗೆ ಘೋಷಣೆ ಕೂಗಿದ್ದಿದ್ದರೆ ಅಲ್ಲಿನ ಪತ್ರಕರ್ತರ “ದೇಶಭಕ್ತಿ'' ಜಾಗೃತವಾಗದೆ ಸಹಜವಾಗಿದ್ದಿದ್ದೇಕೆ? ಏನೂ ನಡೆದೇ ಇಲ್ಲ ಎನ್ನುವಂತೆ ನಡೆದುಕೊಂಡಿದ್ದೇಕೆ? ಮಾಧ್ಯಮದವರನ್ನು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದು, ಮಾಧ್ಯಮ ಜಾಗೃತವಾಗಲಿ. ಜಾಗೃತ ಮಾಧ್ಯಮ ಜನಕಲ್ಯಾಣಕ್ಕೆ ಕಾರಣವಾಗಲಿ. ಈ ರೀತಿ ಭಜನೆಗಲ್ಲಾ ಎಂದು ಹೇಳಿದ್ದಾರೆ.
ಮಂಗಳವಾರ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಸೈಯದ್ ನಾಸಿರ್ ಹುಸೇನ್ ಗೆಲುವು ದಾಖಲಿಸಿದ ವೇಳೆ ಅವರು ಬೆಂಬಲಿಗರು “ಪಾಕಿಸ್ತಾನ್ ಝಿಂದಾಬಾದ್”ಎಂಬ ಘೋಷಣೆ ಕೂಗಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ 'ಎಕ್ಸ್'ನಲ್ಲಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.