ಹಾಸನ ಪೆನ್ ಡ್ರೈವ್ ಪ್ರಕರಣ : ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಮುಖ್ಯಮಂತ್ರಿಗೆ ಮಹಿಳಾ ಆಯೋಗ ಒತ್ತಾಯ

Update: 2024-04-25 16:53 GMT

Photo : ndtv.com

ಬೆಂಗಳೂರು : ಹಾಸನ ಜಿಲ್ಲೆಯಲ್ಲಿ ಪೆನ್ ಡ್ರೈವ್ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಮಹಿಳೆಯರ ಘನತೆ ಹಾಗೂ ಅಸ್ತಿತ್ವಕ್ಕೆ ಹಾನಿ ಉಂಟು ಮಾಡುತ್ತಿರುವವರನ್ನು ಶೀಘ್ರವಾಗಿ ಪತ್ತೆಹಚ್ಚಲು ವಿಶೇಷ ತನಿಖಾ ತಂಡವನ್ನು ರಚಿಸಲು ಆದೇಶ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.

ಗುರುವಾರ ಆಯೋಗದ ಅಧ್ಯಕ್ಷೆ ನಾಗಲಕ್ಷೀ ಚೌದರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದಿದ್ದು, ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್‌ನಲ್ಲಿ ಮಹಿಳೆಯರ ಮೇಲೆ ನಡೆಸಲಾಗುತ್ತಿರುವ ಲೈಂಗಿಕ ಹಿಂಸೆಯ ಕುರಿತು ಮತ್ತು ಸಾವಿರಾರು ಅಮಾಯಕ ಹೆಣ್ಣು ಮಕ್ಕಳನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡು, ಮೊಬೈಲ್‌ನಲ್ಲಿ ಖಾಸಗಿ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದಿದ್ದಾರೆ.

ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿರುವುದಾಗಿ ಮಾಧ್ಯಮಗಳಲ್ಲಿ ಪ್ರಚಾರವಾಗಿರುತ್ತದೆ. ಅಲ್ಲದೇ ಪ್ರಭಾವಿ ರಾಜಕಾರಣಿಗಳು ಅನೇಕ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ, ಕೆಲವರ ಮೇಲೆ ಅತ್ಯಾಚಾರವನ್ನೂ ಮಾಡುತ್ತಿರುವ ತುಣುಕುಗಳಿರುವ ಪೆನ್ ಡ್ರೈವ್‌ಗಳು ಈಗ ಜನ ಸಾಮಾನ್ಯರ ಕೈಗೆ ಸಿಕ್ಕಿವೆ. ಇಡೀ ಸಮಾಜ ತಲೆ ತಗ್ಗಿಸುವ ಸ್ಥಿತಿ ಏರ್ಪಟ್ಟಿದ್ದು, ಮಹಿಳೆಯರ ಬದುಕು ಹಾಗೂ ಘನತೆಯನ್ನು ನಾಶ ಮಾಡುತ್ತಿರುವ ಬಗ್ಗೆ ಸಮೂಹ ಮಾಧ್ಯಮಗಳಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹಲವು ಮಹಿಳೆಯರನ್ನು ಬಲವಂತದಿಂದ ಲೈಂಗಿಕ ಕ್ರಿಯೆಗೆ ಒತ್ತಾಯಪಡಿಸುವ ಮೂಲಕ ಚಿತ್ರೀಕರಿಸಲಾಗಿದೆ ಎನ್ನಲಾಗುತ್ತಿದ್ದು, ಚಿತ್ರೀಕರಣ ಮಾಡಿದ ವ್ಯಕ್ತಿ ಮತ್ತು ಅದನ್ನು ಸಾರ್ವಜನಿಕಗೊಳಿಸಿದ ವ್ಯಕ್ತಿಯನ್ನು ತನಿಖೆಗೆ ಒಳಪಡಿಸಬೇಕು. ಹೀಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲು ಆದೇಶ ನೀಡಬೇಕು ಮತ್ತು ಆರೋಪಿಗಳ ವಿರುದ್ಧ ಕಠಿಣ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಆದೇಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News