ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ಪ್ರೊ.ನಿರಂಜನಾರಾಧ್ಯ ವಿ.ಪಿ. ಒತ್ತಾಯ

Update: 2023-07-11 15:59 GMT

ಬೆಂಗಳೂರು, ಜು.11: ಶಾಲಾ ಶಿಕ್ಷಣ ಹಾಗು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸದನದಲ್ಲಿ ಬಂದ ಒಂದು ಪ್ರಶ್ನೆಯ ಭಾಗವಾಗಿ ಶಿಕ್ಷಕರಿಗೆ ಸಮವಸ್ತ್ರದ ವಿಷಯ ಪ್ರಸ್ತಾಪಿಸಿದ್ದಾರೆ. ಅದರ ಚರ್ಚೆ ಬಗ್ಗೆ ನಡೆಯಲಿ, ನಮ್ಮ ಅಭ್ಯಂತರವಿಲ್ಲ. ಆದರೆ, ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ಅಂಶಗಳ ಕಡೆಗೆ ಗಮನ ಹರಸಬೇಕು ಎಂದು ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ ವಿ.ಪಿ. ತಿಳಿಸಿದ್ದಾರೆ.

ಮಂಗಳವಾರ ಪ್ರಕಟನೆ ಹೊರಡಿಸಿರುವ ಅವರು, ಶಾಲೆ ಪ್ರಾರಂಭವಾಗಿ ಒಂದೂವರೆ ತಿಂಗಳು ಕಳೆದರೂ, ಇನ್ನೂ ಹಲವು ಜಿಲ್ಲೆಗಳಲ್ಲಿ ಮಕ್ಕಳಿಗೆ ಸಮವಸ್ತ್ರ, ಷೂ ಹಾಗು ಸಾಕ್ಸ್ ದೊರೆತಿಲ್ಲ. ಏಳನೆ ತರಗತಿಯಿಂದ ಎಂಟು ಅಥವಾ ಎಂಟರಿಂದ ಒಂಭತ್ತನೆ ತರಗತಿಗೆ ಹೋಗುತ್ತಿರುವ ಮಕ್ಕಳಿಗೆ ಉಚಿತ ಬೈಸಿಕಲ್ ಸಿಕ್ಕಿಲ್ಲ ಎಂದಿದ್ದಾರೆ.

2ನೆ ಕಂತಿನ ಅತಿಥಿ ಶಿಕ್ಷರ ನೇಮಕದಲ್ಲಿ ವಿಳಂಬವಾಗಿರುವುದರಿಂದ ಕಲಿಕೆಗೆ ತೊಂದರೆಯಾಗುತ್ತಿದ್ದು, ಕೂಡಲೇ ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮವಹಿಸಬೇಕು. ಅಂತಿಮಗೊಂಡಿರುವ ಶಿಕ್ಷಕರ ನೇಮಕ ಪ್ರಕ್ರಿಯೆಯನ್ನು ನ್ಯಾಯಾಲಯದಲ್ಲಿ ಶೀಘ್ರವಾಗಿ ಪರಿಹರಿಸಿ 13,352ಖಾಯಂ ಶಿಕ್ಷಕರನ್ನು ಶೀಘ್ರವಾಗಿ ನೇಮಿಸಿಕೊಳ್ಳಲು ಕ್ರಮವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸರಕಾರಿ ಶಾಲೆಯಲ್ಲಿ ಮಕ್ಕಳಿದ್ದರೂ ಶೂನ್ಯ ಶಿಕ್ಷಕರಿರುವ ಶಾಲೆಗಳಿಗೆ ಕೂಡಲೇ ಈ ಖಾಯಂ ಶಿಕ್ಷಕರ ನೇಮಕವಾಗಬೇಕು. ಜೊತೆಗೆ , ಈಗ ನೇಮಕವಾಗುತ್ತಿರುವ ಖಾಯಂ ಶಿಕ್ಷಕರನ್ನು ಅತ್ಯಗತ್ಯವಿರುವ ಗ್ರಾಮೀಣ ಪ್ರದೇಶಗಳಿಗೆ ನಿಯೋಜಿಸಬೇಕು. ಶಾಲೆಗಳಲ್ಲಿ ಬಳಸುವ ವಿದ್ಯುಚ್ಛಕ್ತಿ ಹಾಗು ನೀರಿನ ಬಳಕೆಯ ಬಿಲ್ ಗಳ ಹಣವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮನ್ನಾ ಮಾಡಲು ಕ್ರಮವಹಿಸಬೇಕು ಎಂದು ತಿಳಿಸಿದ್ದಾರೆ.

ಶಾಲಾ ಹಂತದಲ್ಲಿ ಸಂವಿಧಾನ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿರುವ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು ಪ್ರಜಾಸತ್ತಾತ್ಮಕವಾಗಿ ರಚಿಸಿ ಬಲವರ್ಧನೆಗೊಳಿಸಲು ಪರಿಣಾಮಕಾರಿ ತರಬೇತಿ ಒದಗಿಸಲು ಕ್ರಮವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News