ರಾಜ್ಯಕ್ಕೆ ವಿಶೇಷ ಅನುದಾನ ಬಾರದಂತೆ ನಿರ್ಮಲಾ ಸೀತಾರಾಮನ್ ತಡೆ: ಸಿಎಂ ಸಿದ್ದರಾಮಯ್ಯ ಆರೋಪ
ಬೆಂಗಳೂರು, ಜು. 6: ‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಬರಬೇಕಾದ 5,495 ಕೋಟಿ ರೂ.ಅನುದಾನವನ್ನು ತಪ್ಪಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದ್ದಾರೆ.
ಗುರುವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಕೇಂದ್ರದಲ್ಲಿ ಹಣಕಾಸು ಸಚಿವರಾಗಿದ್ದಾರೆ. ಆದರೆ ರಾಜ್ಯಕ್ಕೆ ವಿಶೇಷ ಅನುದಾನವನ್ನು ತಡೆ ಹಿಡಿದ್ದಾರೆ. ಹೀಗಾಗಿ ರಾಜ್ಯಕ್ಕೆ ಬರಬೇಕಾಗಿದ್ದ 5,495ಕೋಟಿ ರೂ.ಅನುದಾನ ಕಡಿತಗೊಂಡಿದೆ. ಈ ಅನುದಾನವನ್ನು ಪಡೆಯುವಂತೆ ನಾನು ಅಂದಿನ ಬಿಜೆಪಿ ಸರಕಾರಕ್ಕೆ ತಿಳಿಸಿದ್ದೇನೆ. ಆದರೆ ಪತ್ರ ಬರೆಯುತ್ತೇವೆ ಎಂದು ಹೇಳಿ ವಿಷಯವನ್ನು ತಳ್ಳಿ ಹಾಕಿತು’ ಎಂದು ಹೇಳಿದರು.
‘15ನೆ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ರಾಜ್ಯಕ್ಕೆ 5,495ಕೋಟಿ ರೂ.ವಿಶೇಷ ಅನುದಾನವನ್ನು ನೀಡಬೇಕು ಎಂದು ಉಲ್ಲೇಖಿಸಿತ್ತು. ಆದರೆ ಕೇಂದ್ರ ಸಚಿವೆ ಅಂತಿಮ ವರದಿಯನ್ನು ಸಲ್ಲಿಸುವಾಗ ಈ ಅನುದಾನವನ್ನು ತಡೆಹಿಡಿದಿದ್ದಾರೆ. ರಾಜ್ಯ ಈ ವಿಶೇಷ ಅನುನದಾನವನ್ನು ನೀಡಿದರೆ ಎಲ್ಲ ರಾಜ್ಯಗಳು ಅನುದಾನಕ್ಕೆ ಬೇಡಿಕೆ ಇಡುತ್ತವೆ ಎಂದು ತಿಳಿಸಿದ್ದಾರೆಂದು ಆರೋಪಿಸಿದರು.
ಕೇಂದ್ರದಿಂದ ರಾಜ್ಯಕ್ಕೆ ಬರುವ ಪಾಲನ್ನು ಪಡೆಯಲು ರಾಜಕಾರಣ ಬದಿಗಿಟ್ಟು ಪಕ್ಷಾತೀತವಾಗಿ ನಾವೆಲ್ಲಾ ಹೋರಾಟ ಮಾಡಬೇಕು. ನಮ್ಮೊಂದಿಗೆ ನೀವು ಕೈಜೋಡಿಸಬೇಕು. ರಾಜ್ಯಕ್ಕಿರುವ ಪಾಲನ್ನು ಪಡೆಯಲು ಹೋರಾಟ ಮಾಡುವ ಜತೆಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ, ವಿರೋಧ ಪಕ್ಷದ ಸದಸ್ಯರನ್ನು ಮನವಿ ಮಾಡಿದರು.
14ನೆ ಹಣಕಾಸು ಆಯೋಗದಲ್ಲಿ ತೆರಿಗೆ ಪಾಲನ್ನು ಶೇ. 4.71ರಷ್ಟು ನೀಡಲಾಗಿತ್ತು. 15ನೆ ಹಣಕಾಸು ಆಯೋಗದಲ್ಲಿ ಶೇ.3.65ರಷ್ಟು ನೀಡಿದ್ದರು. ಹೀಗಾಗಿ ಶೇ.1.06ರಷ್ಟು ಅನುದಾನ ಬರುವುದಕ್ಕೆ ಕೇಂದ್ರ ಸರಕಾರ ತಡೆ ಹಾಕಿತು. ಎರಡನ್ನು ಹೋಲಿಕೆ ಮಾಡಿದರೆ ರಾಜ್ಯಕ್ಕೆ ಅನ್ಯಾಯವಾಗಿದೆ. 16ನೆ ಹಣಕಾಸು ಆಯೋಗದ ರಚನೆ ಸಂಬಂಧ ರಾಜ್ಯ ಸರಕಾರದಿಂದ ಅಗತ್ಯ ಸಲಹೆ ಕೇಳಿದ್ದಾರೆ. 16ನೆ ಹಣಕಾಸು ಆಯೋಗದ ಮುಂದೆ ಸಮರ್ಥವಾಗಿ ವಾದ ಮಂಡಿಸಿ ರಾಜ್ಯಕ್ಕೆ ಬರಬೇಕಾಗಿರುವ ಪಾಲು ಪಡೆಯಲಾಗುವುದು ಎಂದು ಅವರು ತಿಳಿಸಿದರು.