"ಪ್ರಧಾನಿ ಮೋದಿ ಮೇಲಿನ ನಂಬಿಕೆ ತೋರಿಸುವಲ್ಲಿನ ಈ ಯುವತಿಯ ಧೈರ್ಯ ಗಮನಾರ್ಹ": ಚೈತ್ರಾ ಕುಂದಾಪುರ ಕುರಿತ ನಿರ್ಮಲಾ ಸೀತಾರಾಮನ್ ಟ್ವೀಟ್ ವೈರಲ್

Update: 2023-09-15 07:08 GMT

ಉಡುಪಿ: ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ನೀಡುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚಿಸಿದ ಪ್ರಕರಣದ ಆರೋಪಿ ಕುಂದಾಪುರದ ಚೈತ್ರಾ ಕುರಿತು ಬಿಜೆಪಿಯ ಹಿರಿಯ ನಾಯಕಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಹಿಂದೆ ಮಾಡಿದ್ದ ಟ್ವೀಟ್ ಈಗ ವೈರಲ್ ಆಗಿದೆ.

2018ರಲ್ಲಿ ಉಡುಪಿ ನಗರದಲ್ಲಿ ಕಾಂಗ್ರೆಸ್, ಎಡಪಕ್ಷಗಳು ಹಮ್ಮಿಕೊಂಡಿದ್ದ ಭಾರತ್ ಬಂದ್ ಕಾರ್ಯಕ್ರಮವನ್ನು ವಿರೋಧಿಸಿದ್ದ ಚೈತ್ರ, ಕಾಂಗ್ರೆಸ್ ಕಾರ್ಯಕರ್ತರ ಜೊತೆ ಜಗಳಕ್ಕಿಳಿದಿದ್ದಳು. ಅಂಗಡಿ, ಮುಂಗಟ್ಟು ಬಂದ್ ಮಾಡುವ ವೇಳೆ ರಸ್ತೆಗಿಳಿದು ಕಾಂಗ್ರೆಸ್ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡು ಮೋದಿ ಪರ ಘೋಷಣೆ ಕೂಗುತ್ತಾ ಕಾಂಗ್ರೆಸ್ ವಿರುದ್ಧ ಮಾಡಿದ ಹೋರಾಟದ ವೀಡಿಯೋ ಬಿಜೆಪಿ ವರಿಷ್ಠರ ಗಮನಕ್ಕೂ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು.

ಈ ಘಟನೆ ಕುರಿತ ವೀಡಿಯೋ‌ ಒಂದನ್ನು ರೀಟ್ವೀಟ್ ಮಾಡಿ ಚೈತ್ರಾ ಕುಂದಾಪುರಳನ್ನು 'ಡೇರಿಂಗ್ ಗರ್ಲ್' ಎಂದಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ "ಪ್ರಧಾನಿ ಮೋದಿ ಮೇಲಿನ ನಂಬಿಕೆ ತೋರಿಸುವಲ್ಲಿನ ಈ ಯುವತಿಯ ಧೈರ್ಯ ಗಮನಾರ್ಹ" ಎಂದು ಹೇಳಿದ್ದರು.

ಇದರಿಂದ ಚೈತ್ರಾಗೆ ಭಾರೀ ಜನಪ್ರಿಯತೆ ಸಿಕ್ಕಿದ್ದಲ್ಲದೇ ಆಕೆಯ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಬಲ ನೀಡಿತ್ತು. ನಂತರ ಚೈತ್ರಾ ರಾಜ್ಯಾದ್ಯಂತ ಪ್ರಚೋದನಾಕಾರಿ ಭಾಷಣಗಳ ಮೂಲಕ ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿದ್ದಳು.

ನಿರ್ಮಲಾ ಸೀತರಾಮನ್ ಟ್ವೀಟ್ ಮೂಲಕ ತನ್ನ ಜನಪ್ರಿಯತೆ ಹೆಚ್ಚಿಸಿದ್ದ ಚೈತ್ರಾ, ಇಂದಿಗೂ ತನಗೆ ಬಿಜೆಪಿ ಹಿರಿಯ ನಾಯಕರ ಜೊತೆಗೆ ಬಾಂಧವ್ಯ ಇರುವುದಾಗಿ ಬಿಂಬಿಸಿಕೊಂಡು ಗೋವಿಂದ ಪೂಜಾರಿಗೆ ಕೋಟ್ಯಾಂತರ ರೂ. ವಂಚಿಸಿದ್ದಾಳೆ ಎಂದು ಆರೋಪಿಸಲಾಗಿದೆ.

ಇದೀಗ ಚೈತ್ರಾ ಕುಂದಾಪುರ ಕುರಿತ ನಿರ್ಮಲಾ ಸೀತಾರಾಮನ್ ಟ್ವೀಟ್ ಸಾಮಾಜಿಕ ಜಾಲತಾಣಗಳಾದ್ಯಂತ ವೈರಲ್ ಆಗುತ್ತಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.



 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News